ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾನದ ಹಿನ್ನೆಲೆ ವಿಧಾನಸೌಧದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಶಾಂತಿಯುತ ಮತದಾನಕ್ಕಾಗಿ ವಿಧಾನಸೌಧದ ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕಣದಲ್ಲಿ ಯಾರೆಲ್ಲ ಇದ್ದಾರೆ?
ಈ ಬಾರಿ ಒಟ್ಟು 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಣದಲ್ಲಿ 8 ಅಭ್ಯರ್ಥಿಗಳು ಇರುವುದರಿಂದ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ. ಮೋಹನ್, ಶಿವಣ್ಣ ಹಾಗೂ ಐದನೇ ಅಭ್ಯರ್ಥಿಯಾಗಿ ವಿಜಯ್ ಕಾರ್ತಿಕ್ ಕಣದಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಕಣದಲ್ಲಿದ್ದರೆ, ಮೈತ್ರಿಕೂಟದ ಪಾಲುದಾರ ಪಕ್ಷವಾದ ಜೆಡಿಎಸ್‌ನಿಂದ ಗೋವಿಂದರಾಜು ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕುತೂಹಲಕ್ಕೆ ಕಾರಣವೇನು?
ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಅಗತ್ಯವಿದೆ. ಕಾಂಗ್ರೆಸ್ ತನ್ನ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸಲು 140 ಮತಗಳ ಅಗತ್ಯವಿದ್ದು, ಸದ್ಯ ಪಕ್ಷದ ಸಂಖ್ಯಾಬಲ 135 ಇದೆ. ಪಕ್ಷೇತರರು ಹಾಗೂ ಮಿತ್ರಪಕ್ಷಗಳ ಬೆಂಬಲದೊಂದಿಗೆ ಐದನೇ ಅಭ್ಯರ್ಥಿ ವಿಜಯ್ ಕಾರ್ತಿಕ್ ಅವರನ್ನು ಗೆಲ್ಲಿಸಲು ಸಿಎಂ ಡಿ.ಕೆ. ಶಿವಕುಮಾರ್ ಪಣ ತೊಟ್ಟಿದ್ದಾರೆ. ಇನ್ನೊಂದೆಡೆ, ಜೆಡಿಎಸ್ ತನ್ನ ಅಭ್ಯರ್ಥಿ ಗೋವಿಂದರಾಜು ಅವರನ್ನು ಗೆಲ್ಲಿಸಲು ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಟ್ಟಿದೆ.
ಯತ್ನಾಳ್, ಸೋಮಶೇಖರ್, ಹೆಬ್ಬಾರ್
ಈ ಎಲ್ಲ ಲೆಕ್ಕಾಚಾರಗಳ ನಡುವೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರ ನಿಲುವು ತೀವ್ರ ಕುತೂಹಲ ಮೂಡಿಸಿದೆ. ಈ ಶಾಸಕರ ಮತಗಳು ಯಾರ ಕೈ ಹಿಡಿಯಲಿವೆ ಎಂಬ ಭೀತಿ ಮೈತ್ರಿಕೂಟವನ್ನು ಕಾಡುತ್ತಿದೆ. ಅಡ್ಡ ಮತದಾನದ ಭೀತಿಯೂ ಇರುವುದರಿಂದ ಈ ಮೂವರು ಶಾಸಕರ ನಡೆಯನ್ನು ರಾಜಕೀಯ ವಲಯ ಹಾಗೂ ಬಿಜೆಪಿ ಹೈಕಮಾಂಡ್ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.
##ವಿಧಾನಸೌಧ ಸುತ್ತಲು ನಿಷೇಧಾಜ್ಞೆ
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ವಿಧಾನಸೌಧದ ಸುತ್ತಲು 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು, ಸಂಸದರು, ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಾಗೆಯೇ ಅಧಿಕೃತ ಅನುಮತಿ ಪತ್ರ ಹೊಂದಿರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಮತ ಎಣಿಕೆ ಪ್ರತಿನಿಧಿಗಳಿಗೆ ಮಾತ್ರ ಆವರಣದೊಳಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

