ಭದ್ರಾವತಿ: ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ (Swathi) ನೇಣಿಗೆ ಶರಣಾಗಿರುವ ದಾರುಣ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಗೃಹಿಣಿಯು ಪೊಲೀಸ್ ಸಿಬ್ಬಂದಿಯೊಬ್ಬರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪತಿ ಆತ್ಮಹತ್ಯೆ ಬೆನ್ನಿಗೆ ಪತ್ನಿ ನೇಣಿಗೆ
ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ (KSISF) ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.
ಮೋಹನ್ ವಿರುದ್ಧ ಆರೋಪ
ಸ್ವಾತಿ ಅವರು ಸಾಯುವ ಮುನ್ನ ತನ್ನ ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬುವವರ ಹೆಸರನ್ನು ಉಲ್ಲೇಖಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋಹನ್ ಎಂಬ ಪೊಲೀಸ್ ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಸ್ವಾತಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಹೆಣ್ಣು ಮಕ್ಕಳಿದ್ದಾರೆ
ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳು ಈಗ ಅನಾಥರಾಗಿದ್ದಾರೆ. ಸ್ವಾತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ₹18,000 ಸಂಬಳದ ಕೆಲಸ ಖಾಲಿ ಇದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

About The Editor
ನಿತಿನ್ ಆರ್.ಕೈದೊಟ್ಲು






