ಆಗುಂಬೆ ಬಳಿ ಬಾಗಿಲು ತೆಗೆದು ಒಳಗೆ ಬಂದ ಮಹಿಳೆಗೆ ಕಂಡಿದ್ದು ಚೆಲ್ಲಾಪಿಲ್ಲಿಯಾದ ವಸ್ತುಗಳು

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪದ ತಲ್ಲೂರಿನ ಕೌರಿಹಕ್ಲು ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯೊಂದರ ಹಿಂಬಾಗಿಲನ್ನು ಒಡೆದು ನುಗ್ಗಿದ ಕಳ್ಳರು ಬಂಗಾರದ ಕಿವಿಯೋಲೆ ಹಾಗೂ ನಗದು ದೋಚಿದ್ದಾರೆ. ಕೌರಿಹಕ್ಲು ನಿವಾಸಿ ರುಕ್ಮಿಣಿ ಅವರು ತೀರ್ಥಹಳ್ಳಿಯ ಕುರುವಳ್ಳಿಯ ಸಂಬಂಧಿಕರ ಮನೆಗೆ ತೆರಳಿದ್ದರು. (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರಾತ್ರಿ ಸಂಬಂಧಿಕರ ಮನೆಯಲ್ಲಿ ಉಳಿದು, ಮರುದಿನ ತೀರ್ಥಹಳ್ಳಿಯ ಲ್ಯಾಬ್‌ನಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಮನೆಗೆ ಮರಳಿದ್ದಾರೆ. ಮನೆಗೆ ಬಂದು ಮುಂಬಾಗಿಲಿನ ಬೀಗ ತೆಗೆದು ಒಳಪ್ರವೇಶಿಸಿದಾಗ ಬೆಡ್‌ರೂಂನಲ್ಲಿನ ಬೀರುವಿನ ಬಾಗಿಲು ತೆರೆದಿರುವುದು ಹಾಗೂ ಬಟ್ಟೆ ಸೇರಿದಂತೆ ಇತರೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

AGUMBE-NEWS-GRAPHICS-BY-SHIVAMOGGA-LIVE

ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಸುಮಾರು 5 ಗ್ರಾಂ ತೂಕದ ₹80,000 ಮೌಲ್ಯದ ಒಂದು ಜೊತೆ ಬಂಗಾರದ ಕಿವಿಯೋಲೆ ಹಾಗೂ ₹5,000 ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಭಾಗದ ಕೋಣೆಯನ್ನು ಪರಿಶೀಲಿಸಿದಾಗ ಹಿಂಬಾಗಿಲ ತಾಳವನ್ನು ಒಡೆದು ಕಳ್ಳರು ಒಳನುಗ್ಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತಕ್ಷಣ ಅವರು ತಮ್ಮ ಮಗ ಸತೀಶ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.