SHIVAMOGGA LIVE NEWS | 18 JULY 2024
RAINFALL NEWS : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇವತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದಾಗಿ ಕೆರೆಗಳು, ಹಳ್ಳ ಕೊಳ್ಳ ತುಂಬಿವೆ. ಅಲ್ಲದೆ, ಅಲ್ಲಲ್ಲಿ ಮಳೆಯಿಂದ ಹಾನಿ ಉಂಟಾಗಿದೆ.
ರಾತ್ರಿಯಿಂದ ಬಿಡುವು ಕೊಡದ ಮಳೆ
ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶ, ನದಿ, ಹಳ್ಳ -ಕೊಳ್ಳ ಸಮೀಪ ನಲೆಸಿರುವವರಲ್ಲಿ ಆತಂಕ ಮೂಡಿತ್ತು. ಬೆಳಗ್ಗೆವರೆಗೆ ಮಳೆಯಾಗಿದ್ದು ಆ ಬಳಿಕ ಅಲ್ಲಲ್ಲಿ ಸ್ವಲ್ಪ ಬಿಡುವು ನೀಡಿದೆ. ಇವತ್ತು ಶಿಕಾರಿಪುರ, ಸೊರಬ ತಾಲೂಕಿನಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಆಗಾಗ ಸ್ವಲ್ಪ ಹೊತ್ತು ಬಿಡುವು ನೀಡಿ, ಬಳಿಕ ಜೋರು ಮಳೆಯಾಗುತ್ತಿದೆ.
ತೀರ್ಥಹಳ್ಳಿಯಲ್ಲಿ ಮಳೆಯಿಂದ ಹಾನಿ
ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ ತುಸು ಕಡಿಮೆಯಾಗಿದೆ. ಆದರೆ ಮಳೆಯಿಂದ ಹಾನಿ ಮುಂದುವರೆದಿದೆ. ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಮಳವಾಡಿಗೆ ಹೋಗುವ ಕಿರು ಸೇತುವೆ ಶಿಥಿಲಗೊಂಡಿದೆ. ಪಟ್ಟಣದ ಮಿಲ್‌ಕೇರಿಯಲ್ಲಿ ತೆಂಗಿನ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿತ್ತು. ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನಸ ಗ್ರಾಮದ ಲೀಲಾವತಿ ಭುಜಂಗಶೆಟ್ಟಿ ಅವರ ಮನೆ ಗೊಡೆ ಕುಸಿದಿದೆ. ಗಾಂಧಿ ನಗರದ ಪೂರ್ಣಿಮಾ ಎಂಬುವವರ ಮನೆ ಮತ್ತು ತೀರ್ಥ ಮತ್ತೂರು ಗ್ರಾಮದ ಗಣೇಶ್ ಅವರ ಮನೆ ಹಿಂಭಾಗದ ಗೋಡೆ ಕುಸಿದಿದೆ.
ಸೊರಬದಲ್ಲಿ ತೋಟಗಳು ಜಲಾವೃತ
ಮಳೆಯಿಂದಾಗಿ ತಾಲೂಕಿನ ಕಸಬ ಹೋಬಳಿ ಕೊಡಕಣಿ ಗ್ರಾಮದಲ್ಲಿ ಗೀತಾ ಅವರ ಕೊಟ್ಟಿಗೆ ಮನೆ ಬಿದ್ದಿದೆ. ಉಳವಿ ಹೋಬಳಿ ಎನ್.ದೊಡ್ಡೇರಿ ಗ್ರಾಮದ ನಾಗಪ್ಪ ಅವರ ಮನೆ ಮೇಲೆ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ವರದಾ ಮತ್ತು ದಂಡಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಮಟ್ಟಕ್ಕೆ ತಲುಪಿವೆ. ಕಡಸೂರು ಬಳಿ ವರದಾ ನದಿಯಿಂದ ತೋಟ ಜಲಾವೃತವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಸೇತುವೆ ತಡೆಗೋಡೆ ಕುಸಿಯುವ ಭೀತಿ
ಸಾಗರ ತಾಲೂಕಿನಲ್ಲಿ ಮಳೆ ಜೋರಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿವೆ. ಮನೆಗಳು, ಕೊಟ್ಟಿಗೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದ ಸೇತುವೆಯ ಕೆಳಭಾಗದಲ್ಲಿ ತಡೆಗೋಡೆ ಕುಸಿದು ಸೇತುವೆ ಅಪಾಯಕ್ಕೆ ಸಿಲುಕಿದೆ. ಸಾರ್ವಜನಿಕರು ನಿತ್ಯ ಓಡಾಟಕ್ಕೆ ಇದೇ ಸೇತುವೆ ಬಳಸುತ್ತಿದ್ದಾರೆ. ಮಳೆಗೆ ಸೇತುವೆ ತಡೆಗೋಡೆ ಕುಸಿದಿದೆ. ಹಳವಗೋಡು ನಾಗರಾಜ ಗೌಡ ಅವರು ಸರ್ಕಾರದಿಂದ ಅನುದಾನ ಪಡೆಯದೆ ತಮ್ಮ ಜಮೀನಿನಲ್ಲಿ ಹಾದುಹೋಗುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿದ್ದರು. ಇದು ಸಾಕಷ್ಟು ಜನರಿಗೆ ಅನುಕೂಲವಾಗಿತ್ತು. ಪ್ರಸ್ತುತ ಸೇತುವೆ ಅಪಾಯದ ಸ್ಥಿತಿಯಲ್ಲಿದ್ದು, ದುರಸ್ತಿಗೆ ಹಣ ಹೊಂದಿಸುವುದು ಕಷ್ಟವಾಗಿದೆ.
ಹೊಸನಗರದಲ್ಲಿ ಬಿಡುವು ಕೊಡದ ವರುಣ
ಹೊಸನಗರ ತಾಲೂಕಿನಲ್ಲಿ ಮಳೆ ನಿರಂತರವಾಗಿ ಅಬ್ಬರಿಸುತ್ತಿದೆ. ನಗರ ಹೋಬಳಿಯಲ್ಲಿ ಬಿರುಸಾದ ಮಳೆಯಾಗುತ್ತಿದೆ. ಮನೆಗಳು, ಕೊಟ್ಟಿಗೆಗೆ ಹಾನಿಯಾದ ವರದಿಯಾಗುತ್ತಿದೆ. ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗದ ಮಾವಿನಗದ್ದೆ ತಿರುವಿನಲ್ಲಿ ವ್ಯಾಪಕ ಮಳೆಗೆ ಧರೆ ಕುಸಿತ ಉಂಟಾಗುತ್ತಿದೆ. ಮೂರು ವರ್ಷದ ಹಿಂದೆ ಇಲ್ಲಿ ಧರೆ ಕುಸಿತ ಉಂಟಾಗಿತ್ತು.
ಇದನ್ನೂ ಓದಿ ⇓
ಹೊಸನಗರದಲ್ಲಿ ಭಾರಿ ಮಳೆ, ಭದ್ರಾವತಿಯಲ್ಲಿ ಅತಿ ಕಡಿಮೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200