SHIVAMOGGA LIVE NEWS | 6 DECEMBER 2022
ಶಿವಮೊಗ್ಗ : ಜಿಲ್ಲೆಯ ಅತ್ಯಂತ ಪ್ರಮುಖ ಕ್ಷೇತ್ರ ಶಿವಮೊಗ್ಗ ನಗರ. ಜಿಲ್ಲಾ ಕೇಂದ್ರವಾಗಿರುವುದರಿಂದ ಎಲ್ಲಾ ರಾಜಕೀಯ ಚಟುವಟಿಕೆಗು ಈ ಕ್ಷೇತ್ರ ವೇದಿಕೆಯಾಗಿದೆ. ಪ್ರಸ್ತುತ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರಾನೇರ ಹೋರಾಟವಿದೆ. ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಜನರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. (Shimoga Legislative Assembly)
ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಶಿವಮೊಗ್ಗ ನಗರ ಈಚೆಗೆ ಬಿಜೆಪಿ ತೆಕ್ಕೆಗೆ ಜಾರಿದೆ. ಕೆ.ಎಸ್.ಈಶ್ವರಪ್ಪ ಅವರು ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿಯು ಸ್ಪರ್ಧೆಗೆ ಸಿದ್ಧವಾಗಿದ್ದಾರೆ.
Shimoga Legislative Assembly
ಈತನಕ ಯಾರೆಲ್ಲ ಗೆದ್ದಿದ್ದಾರೆ?
ಶಿವಮೊಗ್ಗ ನಗರ ಕ್ಷೇತ್ರವು 14 ಬಾರಿ ವಿಧಾನಸಭೆ ಚುನಾವಣೆಯನ್ನು ಕಂಡಿದೆ. ಈ ಪೈಕಿ 8 ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. 6 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.
ಮೈಸೂರು ಸಂಸ್ಥಾನವಿದ್ದಾಗ ಕಾಂಗ್ರೆಸ್ ಪಕ್ಷದ ಎಸ್.ಆರ್.ನಾಗಪ್ಪ ಶೆಟ್ಟಿ ಅವರು ವಿಧಾನಸಭೆಯಲ್ಲಿ ಶಿವಮೊಗ್ಗ್ಗವನ್ನ ಪ್ರತಿನಿಧಿಸಿದ್ದರು.
ಆ ಬಳಿಕ, ರತ್ನಮ್ಮ ಮಾಧವ ರಾವ್ ಅವರು ಈ ಕ್ಷೇತ್ರದ ಮೊದಲ ಶಾಸಕಿಯಾದರು. 1957 ಮತ್ತು 1962ರಲ್ಲಿ ಇಲ್ಲಿ ಗೆಲುವು ಕಂಡಿದ್ದರು. 1967ರಲ್ಲಿ ಭದ್ರಿನಾರಾಯಣ (ಕಾಂಗ್ರೆಸ್), 1972ರಲ್ಲಿ ಎ.ಬಿ.ಬಿ.ನಾರಾಯಣ ಅಯ್ಯಂಗಾರ್ (ಕಾಂಗ್ರೆಸ್), 1978ರಲ್ಲಿ ಕೆ.ಹೆಚ್.ಶ್ರೀನಿವಾಸ್ (ಕಾಂಗ್ರೆಸ್), 1983ರಲ್ಲಿ ಎಂ.ಆನಂದ ರಾವ್ (ಬಿಜೆಪಿ), 1985ರಲ್ಲಿ ಕೆ.ಹೆಚ್.ಶ್ರೀನಿವಾಸ್ (ಕಾಂಗ್ರೆಸ್), 1989 ಕೆ.ಎಸ್.ಈಶ್ವರಪ್ಪ (ಬಿಜೆಪಿ), 1994ರಲ್ಲಿ ಕೆ.ಎಸ್.ಈಶ್ವರಪ್ಪ (ಬಿಜೆಪಿ), 1999ರಲ್ಲಿ ಹೆಚ್.ಎಂ.ಚಂದ್ರಶೇಖರಪ್ಪ (ಕಾಂಗ್ರೆಸ್), 2004ರಲ್ಲಿ ರಲ್ಲಿ ಕೆ.ಎಸ್.ಈಶ್ವರಪ್ಪ (ಬಿಜೆಪಿ), 2008ರಲ್ಲಿ ರಲ್ಲಿ ಕೆ.ಎಸ್.ಈಶ್ವರಪ್ಪ (ಬಿಜೆಪಿ), 2013ರಲ್ಲಿ ಕೆ.ಬಿ.ಪ್ರಸನ್ನಕುಮಾರ್ (ಕಾಂಗ್ರೆಸ್), 2018ರಲ್ಲಿ ರಲ್ಲಿ ಕೆ.ಎಸ್.ಈಶ್ವರಪ್ಪ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
Shimoga Legislative Assembly
ಕ್ಷೇತ್ರದಲ್ಲಿ ಈಶ್ವರಪ್ಪ ದಾಖಲೆ
ರತ್ನಮ್ಮ ಮಾಧವ ರಾವ್ ಮತ್ತು ಕೆ.ಹೆಚ್.ಶ್ರೀನಿವಾಸ್ ಅವರು ಶಿವಮೊಗ್ಗ ನಗರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು. ಇವರ ಹೊರತು ಉಳಿದವರಾರಿಗು ಎರಡನೆ ಬಾರಿ ವಿಧಾನಸಭೆ ಪ್ರವೇಶಿಸುವ ಅವಕಾಶ ಸಿಗಲಿಲ್ಲ. ಆದರೆ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಮಾತ್ರ ಇಲ್ಲಿ ದಾಖಲೆ ಮಾಡಿದ್ದಾರೆ. ಐದು ಬಾರಿ ಶಿವಮೊಗ್ಗ ನಗರದ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇಲ್ಲಿಂದ ಗೆದ್ದು ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿಯು ಜವಾಬ್ದಾರಿ ನಿಭಾಯಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸೋಲನುಭವಿಸದಾಗ ವಿಧಾನ ಪರಿಷತ್ ಪ್ರವೇಶಿಸಿದ್ದರು.
2018ರ ಚುನಾವಣೆ ಫಲಿತಾಂಶ
ಅಭ್ಯರ್ಥಿ | ಪಡೆದ ಮತ |
ಕೆ.ಎಸ್.ಈಶ್ವರಪ್ಪ (ಬಿಜೆಪಿ) | 1,04,027 |
ಕೆ.ಬಿ.ಪ್ರಸನ್ನ ಕುಮಾರ್ (ಕಾಂಗ್ರೆಸ್) | 57,920 |
ಗೆಲುವಿನ ಅಂತರ – 46,107 |
ಟಿಕೆಟ್ ಗಾಗಿ ಇಲ್ಲಿ ಬಾರಿ ಪೈಪೋಟಿ
ಶಿವಮೊಗ್ಗದಿಂದ ಸ್ಪರ್ಧೆ ಮಾಡಲು ಆಕಾಂಕ್ಷಿಗಳ ದೊಡ್ಡ ಪಟ್ಟಿಯೆ ಇದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಜಿದ್ದಾಜಿದ್ದಿ ಇದೆ. ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ಪ್ರಬಲ ಆಕಾಂಕ್ಷಿ. ಟಿಕೆಟ್ ಸಿಗುವ ವಿಶ್ವಾಸವು ಈಶ್ವರಪ್ಪ ಅವರಿಗಿದೆ. ಆದರೆ ಅಚ್ಚರಿಯ ಅಭ್ಯರ್ಥಿಗಳನ್ನು ಪ್ರಕಟಿಸುವುದು ಬಿಜೆಪಿಗೆ ಹೊಸತೇನಲ್ಲ. ಇದೆ ಕಾರಣಕ್ಕೆ ಈ ಬಾರಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ತಮ್ಮ ಪ್ರಾಭಾವವನ್ನು ಹೈಕಮಾಂಡ್ ತನಕ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯು ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಈಗಾಗಲೆ ಟಿಕೆಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಯಾರಿಗೆ ಟಿಕೆಟ್ ಸಿಗಬಹುದು ಎಂಬುದು ಸದ್ಯದ ಕುತೂಹಲವಾಗಿದೆ. ಜೆಡಿಎಸ್ ಪಕ್ಷದಲ್ಲಿ ಇನ್ನು ಚುನಾವಣೆ ಕಾವು ಪಡೆದಿಲ್ಲ. ಎಂ.ಶ್ರೀಕಾಂತ್ ಅವರೆ ಪುನಃ ಸ್ಪರ್ಧೆಗಿಳಿಯಬಹುದಾಗಿದೆ. ಎಎಪಿ ಕೂಡ ಹವಾ ಸೃಷ್ಟಿಸಲು ಯತ್ನಿಸುತ್ತಿದೆ. ಆಕಾಂಕ್ಷಿಗಳು ಈಗಾಗಲೆ ಪ್ರಚಾರ ಆರಂಭಿಸಿದ್ದಾರೆ.
2018ರಲ್ಲಿ ಮತದಾನ ಪ್ರಮಾಣ
ಒಟ್ಟು ಮತದಾರರು | ಮತದನಾವಾಗಿದ್ದು ಎಷ್ಟು? | ಶೇಕಡವಾರು ಮತಾದನ |
256373 | 171479 | 67.51 |
2018ರಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳ ವಿವರ
ನಾಮಪತ್ರ ಸಲ್ಲಿಸಿದವರು | ಕಣಕ್ಕಿಳಿದವರು | ಠೇವಣಿ ಕಳೆದುಕೊಂಡವರು |
21 | 20 | 18 |
Shimoga Legislative Assembly
ಜಾತಿವಾರು ಬಲಾಬಲ ಹೇಗಿದೆ?
ಜಾತಿ ಬಲದ ಆಧಾರದ ಮೇಲೆ ಈ ಕ್ಷೇತ್ರದ ಟಿಕೆಟ್ ಆಯ್ಕೆ ಮಾಡಲಾಗುತ್ತಿತ್ತು. ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಿತ್ತಿತ್ತು. 1999ರಲ್ಲಿ ಪಕ್ಷ ತಂತ್ರ ಬದಲಿಸಿತು. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿ, ಗೆಲುವು ಕಂಡಿತು. ಆ ಬಳಿಕ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಕೇಂದ್ರಿತ ರಾಜಕೀಯ ಆರಂಭವಾಯಿತು.
ಜಾತಿ ಬಲ ಹೆಚ್ಚಿಲ್ಲದಿದ್ದರು ಕೆ.ಎಸ್.ಈಶ್ವರಪ್ಪ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಇದು ಜಾತಿ ಲೆಕ್ಕಾಚಾರಗಳನ್ನು ತೆಲೆಕೆಳಗಾಗಿಸಿತು. ಧರ್ಮಾಧಾರಿತ ರಾಜಕಾರಣಕ್ಕೆ ಕ್ಷೇತ್ರ ಸಾಕ್ಷಿಯಾಯಿತು. ಈಗಲು ಅಭ್ಯರ್ಥಿಗಳನ್ನ ಕಣಕ್ಕಿಳಿಸಿಲು ಪಕ್ಷಗಳು ಜಾತಿ, ಧರ್ಮದ ಲೆಕ್ಕಾಚಾರ ಮಾಡುತ್ತಿವೆ.
ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಇದರ ಜೊತೆಗೆ ಬ್ರಾಹ್ಮಣ, ಒಕ್ಕಲಿಗ, ಕುರುಬ, ಈಡಿಗ ಸಮುದಾಯಗಳ ಮತಗಳು ದೊಡ್ಡದಿದೆ. ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ, ಪಂಗಡದ ಮತದಾರರು ಕೂಡ ನಿರ್ಣಾಯಕರಾಗಬಲ್ಲರು.
ALSO READ – ಚುನಾವಣೆಗು ಮೊದಲೆ ಆಪರೇಷನ್ ಆರಂಭಿಸಿದ ಬಿಜೆಪಿ, ಭದ್ರಕೋಟೆ ಉಳಿಸಿಕೊಳ್ಳಲು ಪ್ಲಾನ್ ರೆಡಿ
2023ರ ಚುನಾವಣೆ ಕ್ಷೇತ್ರದ ಹಲವು ರಾಜಕಾರಣಿಗಳಿಗೆ ನಿರ್ಣಾಯಕವಾಗಿದೆ. ಗೆದ್ದವರಿಗೆ ರಾಜಕೀಯವಾಗಿ ಮರು ಹುಟ್ಟು ಸಿಗಲಿದೆ. ಟಿಕೆಟ್ ವಂಚಿತರು ಮತ್ತು ಸೋಲನುಭವಿಸಿದವರ ರಾಜಕೀಯ ಭವಿಷ್ಯ ಕೊನೆಯಾಗಲಿದೆ. ಇದೆ ಕಾರಣಕ್ಕೆ ಟಿಕೆಟ್ ಪೈಪೋಟಿ, ಗೆದ್ದೆ ಗೆಲ್ಲಬೇಕು ಎಂಬ ಹಠದಲ್ಲಿ ನಾನಾ ಕಸರತ್ತು ಕಾಣಬಹುದಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200