‘ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಸಿದ್ದರಾಮಯ್ಯ ರಾಜ್ಯದ ಕ್ಷಮೆಯಾಚಿಸಬೇಕುʼ

Published On : ಏಪ್ರಿಲ್ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯದ ತೀರ್ಪನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸ್ವಾಗತಿಸಿದ್ದಾರೆ. ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣಬಲ ಮತ್ತು ಅಧಿಕಾರದ ಮದದಿಂದ ಕೊಲೆ ಮಾಡಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದವರಿಗೆ ಈ ತೀರ್ಪು ತಕ್ಕ ಸಂದೇಶ ನೀಡಿದೆ. ಅಂದಿನ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಸಚಿವರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು. ಇಂತಹವರನ್ನು ಸಂಭಾಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು,ʼ ಎಂದು ಆಗ್ರಹಿಸಿದರು.

Thirthahalli-MLA-Araga-Jnanendra-

ಪೊಲೀಸ್ ವ್ಯವಸ್ಥೆ ದುರ್ಬಳಕೆ

‘ವಿನಯ್ ಕುಲಕರ್ಣಿ ಅವರು ಪ್ರಕರಣದ ಹಾದಿ ತಪ್ಪಿಸಲು ಪೊಲೀಸರನ್ನೇ ಬಳಸಿಕೊಂಡಿದ್ದಾರೆ. ಅಂದು ಈ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಯೊಬ್ಬರಿಗೆ ಸಿದ್ದರಾಮಯ್ಯ ಅವರು ಸಿಎಂ ಪದಕ ಕೊಡಿಸಿ ಗೌರವಿಸಿದ್ದರು. ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಒಳ್ಳೆಯ ಹೆಸರಿದೆ. ಆದರೆ, ಕಾಂಗ್ರೆಸ್ ಶಾಸಕರು ಮತ್ತು ಸಚಿವರು ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಸಮವಸ್ತ್ರ ಹಾಕಿಕೊಂಡು ಏನೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಕೆಲವು ಅಧಿಕಾರಿಗಳಿಗೆ ಈ ತೀರ್ಪು ಆಘಾತ ತಂದಿದೆ,ʼ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.

ಇದನ್ನೂ ಓದಿ : ಸಾಗರ, ಹೊಸನಗರ, ತೀರ್ಥಹಳ್ಳಿ ಜನರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ, ಪ್ರಮುಖ ಸೂಚನೆ ಬಿಡುಗಡೆ

ಸಿಬಿಐ ತನಿಖೆಯಿಂದ ಸತ್ಯಕ್ಕೆ ಜಯ

‘ಅಂದು ಬಿ.ಎಸ್. ಯಡಿಯೂರಪ್ಪ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಸತ್ಯ ಮಣ್ಣು ಪಾಲಾಗುತ್ತಿತ್ತು. ಸದಾ ಸಿಬಿಐ ತನಿಖೆಯನ್ನು ಪ್ರಶ್ನಿಸುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಈಗ ಉತ್ತರ ಸಿಕ್ಕಿದೆ. ಹಣ ಬಲದಿಂದ ಸಾಕ್ಷಿ ನಾಶ ಮಾಡಿ, ಬೇರೆಯವರನ್ನು ಶರಣಾಗುವಂತೆ ಮಾಡುವ ಆಟ ಈಗ ಅಂತ್ಯಗೊಂಡಿದೆ. ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ನ್ಯಾಯಾಧೀಶರು ಮತ್ತು ವಾದ ಮಂಡಿಸಿದ ವಕೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ,ʼ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 17, 2026

Leave a Comment