ಶಿವಮೊಗ್ಗದಲ್ಲಿ ಸರ್ವೋದಯ ಪಕ್ಷದ ಜಿಲ್ಲಾ ಕಚೇರಿ, ಕಾರ್ಯಕರ್ತರ ಸಮಾವೇಶ, ಎಲ್ಲಿ? ಯಾವಾಗ?

ಶಿವಮೊಗ್ಗ: ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಘಟಕದ ನೂತನ ಕಚೇರಿ ಉದ್ಘಾಟನೆ ಹಾಗೂ ಜಿಲ್ಲಾ ಕಾರ್ಯಕರ್ತರ ಸಮಾವೇಶವು ನವೆಂಬರ್ 21ರಂದು ನಗರದಲ್ಲಿ ನಡೆಯಲಿದೆ ಎಂದು ಪಕ್ಷದ ಮುಖಂಡ ಎಂ.ಎ. ನಟರಾಜ್ ಮಂಗಳ ತಿಳಿಸಿದರು. (ಈ ಸುದ್ದಿಯನ್ನು ಇನ್ನು 57 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಶಂಕರ ಮಠ ರಸ್ತೆಯ ಓಂ ಕಾಂಪ್ಲೆಕ್ಸ್‌ನಲ್ಲಿ ನೂತನ ಕಚೇರಿ ಉದ್ಘಾಟನೆಯಾಗಲಿದೆ. ಬಳಿಕ ಮಧ್ಯಾಹ್ನ 12ಕ್ಕೆ ಹೊನ್ನಾಳಿ ರಸ್ತೆಯ ಲೋಹಿತ್ ಇಂಟರ್‌ನ್ಯಾಷನಲ್ ಹಾಲ್‌ನಲ್ಲಿ ಜನಪರ ರಾಜಕಾರಣ ಮತ್ತು ಸರ್ವೋದಯ ಕರ್ನಾಟಕ ಪಕ್ಷ ವಿಷಯವಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

Sarvodaya-Karnataka-Party-Shivamogga-Unit-press-meet

ನೂತನ ಜಿಲ್ಲಾ ಸಮಿತಿ

ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿ ರಚಿಸಲಾಗುವುದು. ಪರ್ಯಾಯ ರಾಜಕಾರಣದಲ್ಲಿ ಆಸಕ್ತಿಯಿರುವ ಯುವಜನರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಟರಾಜ್ ಮಂಗಳ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ರಾಜಕೀಯ ವ್ಯವಸ್ಥೆ ಸಂಪೂರ್ಣ ಕಲುಷಿತಗೊಂಡಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನಪ್ರತಿನಿಧಿಗಳು ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಹೋರಾಟದ ಹಿನ್ನೆಲೆಯಿಲ್ಲದವರು ರಾಜಕೀಯ ಪ್ರವೇಶಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.

-‌ ಎನ್.ಶಿವಾನಂದ ಕುಗ್ವೆ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಕುಮಾರ್, ಉಮೇಶ್ ಈಶ್ವರ ನಾಯ್ಕ, ರಮೇಶ್ ದೇಸಾಯಿ ಹಾಗೂ ಎಚ್.ಎ. ಸತೀಶ್ ಚಂದ್ರ ಉಪಸ್ಥಿತರಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: