ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಚರ್ಚೆ ಬಿರುಸಾಗಿದೆ. ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. (ಶಿವಮೊಗ್ಗ ಲೈವ್.ಕಾಂ | ಮುಂದಿನ 6 ಪ್ಯಾರಾಗಳು ಕೆಳಗಿವೆ)
ಆರ್ಎಸ್ಎಸ್ ಹಿರಿಯರ ಸಲಹೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರು ತಮ್ಮನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆ ಆಗುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಾರ್ಯಕರ್ತರು ಹಾಗೂ ಬೆಂಬಲಿಗರ ಸಲಹೆಯಂತೆ ಈ ಕುರಿತು ಮತ್ತಷ್ಟು ಚರ್ಚಿಸಿ ಮುಂದಿನ ಎಂಟು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಈಶ್ವರಪ್ಪ ತಿಳಿಸಿದರು.

‘ಐದು ದಿನದಲ್ಲಿ ಮೂರು ಸಭೆ’
ಆರ್ಎಸ್ಎಸ್ ನಾಯಕರ ಪ್ರಸ್ತಾವನೆ ಬಂದ ಬೆನ್ನಲ್ಲೇ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಹಾಗೂ ಹಿತೈಷಿಗಳ ಜತೆ ಮೂರು ಹಂತಗಳಲ್ಲಿ ಸಮಾಲೋಚನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ನಗರದ ಪ್ರಮುಖ 50 ಮುಖಂಡರೊಂದಿಗೆ ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಎರಡನೇ ಹಂತದಲ್ಲಿ ನಗರದ ಪದಾಧಿಕಾರಿಗಳು ಹಾಗೂ ಮೂರನೇ ಹಂತದಲ್ಲಿ ತಮ್ಮನ್ನು ಐದು ಬಾರಿ ಶಾಸಕರಾಗಿ ಗೆಲ್ಲಿಸಿದ ವಿವಿಧ ಸಮುದಾಯಗಳ ಪ್ರಮುಖರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
‘ಮತ್ತೊಮ್ಮೆ ಮೋಸ ಹೋಗಬೇಡಿʼ
ಮೂರೂ ಹಂತದ ಸಭೆಗಳಲ್ಲಿ ಭಾಗವಹಿಸಿದ ನಾಯಕರು ಹಾಗೂ ಕಾರ್ಯಕರ್ತರು, ತರಾತುರಿಯಲ್ಲಿ ಬಿಜೆಪಿ ಸೇರದಂತೆ ಸಲಹೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಿಮಗೆ ಟಿಕೆಟ್ ತಪ್ಪಿಸಲಾಯಿತು. ಈ ಬಾರಿ ರಾಷ್ಟ್ರ ಮಟ್ಟದ ನಾಯಕರು ಅಥವಾ ಪರಿವಾರದ ಪ್ರಮುಖರು ಭರವಸೆ ನೀಡಿದರೆ ಮಾತ್ರ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧಿಸಿ. ಮತ್ತೊಮ್ಮೆ ಮೋಸ ಹೋಗಬೇಡಿ. ನೀವು ಮೋಸ ಹೋದರೆ ನಿಮ್ಮನ್ನು ನಂಬಿರುವ ಸಾವಿರಾರು ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಚುನಾವಣೆಗೆ ಇನ್ನು ಒಂದೂವರೆ ವರ್ಷ ಸಮಯವಿದೆ. ಆದ್ದರಿಂದ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಮುಂದಿನ ಎಂಟು ದಿನಗಳಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಪ್ರಕಟಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.