ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 JUNE 2024
SHIMOGA : ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ (Voting) ಚುರುಕುಗೊಂಡಿದೆ. ಸರತಿಯಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ವಿನೋಬನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಡಾ. ಧನಂಜಯ ಸರ್ಜಿ, ‘ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ನೈಋತ್ಯ ಪದವೀಧರರ ಕ್ಷೇತ್ರದಿಂದ ತಮ್ಮ ಗೆ ಗೆಲುವಾಗಲಿದೆʼ ಎಂದು ಭರವಸೆ ವ್ಯಕ್ತಪಡಿಸಿದರು.
ಬಾಲರಾಜ ಅರಸ್ ರಸ್ತೆಯಲ್ಲಿ ಪಿಡಬ್ಲುಡಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತ ಚಲಾಯಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಆಯನೂರು ಮಂಜುನಾಥ್, ‘ಐದು ಜಿಲ್ಲೆಯಲ್ಲಿ ಮತದಾನ ಬಿರುಸಾಗಿದೆ. ಕಾಂಗ್ರೆಸ್ನ ಪ್ರಣಾಳಿಕೆ ಮತ್ತು ಕಾರ್ಯವೈಖರಿ ಗಮನಿಸಿ ತಮ್ಮ ಪರವಾಗಿ ಮತ ಚಲಾಯಿಸುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಮಂಜುನಾಥ್ ಅವರೂ ಗೆಲುವು ಸಾಧಿಸಲಿದ್ದಾರೆ’ ಎಂದರು.
ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ವಿನೋಬನಗರದ ಡಿವಿಎಸ್ ಹೈಸ್ಕೂಲ್ನಲ್ಲಿ ಮತ ಚಲಾಯಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನಗರದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿದ್ದೆ. ಮತದಾರರಿಂದ ತಮ್ಮ ಪರವಾಗಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಪಕ್ಷದ ವಿರುದ್ಧ ಚುನಾವಣೆ ನಡೆಸುವುದು ಸುಲಭವಲ್ಲ. ಅದರೆ ಎರಡು ಬಾರಿ ಇದೇ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದರಿಂದ ಮತದಾರರಿಗೆ ತಮ್ಮ ಪರ ಒಲವಿದೆʼ ಎಂದರು.
ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ರಾಮಣ್ಣ ಸೇರಿದಂತೆ ಹಲವರು ಮತ ಚಲಾಯಿಸಿದರು.
ಜಿಲ್ಲೆಯಲ್ಲಿ ಬಿರುಸಿನ ಮತದಾನ
ಶಿವಮೊಗ್ಗ ಜಿಲ್ಲೆಯಾದ್ಯಂತ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಕ್ಕೆ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 12 ಗಂಟೆವರೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇ. 43.12ರಷ್ಟು ಮತದಾನವಾಗಿದೆ. ನೈಋತ್ಯ ಪದವೀಧರರ ಕ್ಷೇತ್ರ ಶೇ.34.21ರಷ್ಟು ಮತದಾನವಾಗಿದೆ. ಸಂಜೆ 4 ಗಂಟೆವರೆಗೆ ಮಾತ್ರ ಮತದಾನಕ್ಕೆ ಅವಕಾಶವಿದೆ.
ಇದನ್ನೂ ಓದಿ – ಹನಸವಾಡಿಯಲ್ಲಿ ಮಹಿಳೆಗೆ ಡಿಕ್ಕಿಯಾಗಿ ಹೊಟೇಲ್ಗೆ ನುಗ್ಗಿದ ಕಾರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422