ಶಿವಮೊಗ್ಗ : ರಾಜ್ಯ ಸರ್ಕಾರದ ಬಜೆಟ್‌ನಲ್ಲಿ (Budget) ಶಿವಮೊಗ್ಗ ಜಿಲ್ಲೆಗೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಆದರೆ ಬಜೆಟ್ ಹೊರತಾಗಿಯು ಜಿಲ್ಲೆಯಲ್ಲಿ ಹಲವು ಯೋಜನೆಗಳು ಜಾರಿಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರದ ಹೊರತಾಗಿಯು ಬಜೆಟ್‌ನಲ್ಲಿ (Budget) ಜಿಲ್ಲೆಗೆ ಹಲವು ಯೋಜನೆಗಳ ಲಾಭ ದೊರೆಯಲಿದೆ. ಇನ್ನೊಂದೆಡೆ ಬಜೆಟ್‌ನಲ್ಲಿ ಘೋಷಣೆ ಆಗದಿದ್ದರು ಹಲವು ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವ ಅವಕಾಶವಿದೆ. ಆ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು.
ಮಿನಿಸ್ಟರ್ ಏನೆಲ್ಲ ಹೇಳಿದರು?
ಜಿಲ್ಲಾಡಳಿತ ಭವನಕ್ಕೆ ಸದ್ಯದಲ್ಲೇ ಟೆಂಡರ್
ಜಿಲ್ಲಾಡಳಿತ ಭವನ ಕಟ್ಟಡವು ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ. ಆದರೆ ಇಲಾಖವಾರು ಅನುದಾನ ಪಡೆದು ಭವನ ನಿರ್ಮಿಸಲಾಗುತ್ತದೆ. ಜಿಲ್ಲಾಡಳಿತ ಭವನ ಕಟ್ಟಡದಲ್ಲಿ ಕಂದಾಯ ವಿಭಾಗ, ಜಿಲ್ಲಾ ರಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಕೂಡ ಇರಲಿವೆ. ಆದ್ದರಿಂದ ಕಂದಾಯ ಇಲಾಖೆಯಿಂದ 50 ಕೋಟಿ ರೂ., ಗೃಹ ಇಲಾಖೆಯಿಂದ 25 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಪಡೆಯಲಾಗುತ್ತದೆ ಎಂದರು.

ಜಿಲ್ಲಾಡಳಿತ ಭವನಕ್ಕೆ ಜಾಗವಿದೆ, ನೀಲನಕ್ಷೆಯು ಸಿದ್ಧವಾಗಿದೆ. ಬಜೆಟ್‌ನಲ್ಲಿ ಭವನಕ್ಕೆ ಅನುದಾನ ಕೊಡುವ ಬದಲು ಇಲಾಖಾವಾರು ಹಣ ಬಿಡುಗಡೆ ಮಾಡಿಸಿ, ಟೆಂಡರ್ ಕರೆಯಲು ಸೂಚಿಸಲಾಗಿದೆ. 200 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದ್ದು, ಎರಡೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಸದ್ಯದಲ್ಲೇ
ಮೆಗ್ಗಾನ್ ಆಸ್ಪತ್ರೆಯನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಸಿಮ್ಸ್) ವಹಿಸಲಾಗಿದೆ. ಆಸ್ಪತ್ರೆಯಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ಇನ್ನು, ಜಾಗದ ಸಮಸ್ಯೆಯಿಂದಾಗಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ತಡವಾಗುತ್ತಿದೆ. ಶೀಘ್ರ ಸಮಸ್ಯೆ ಪರಿಹರಿಸಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಶರಾವತಿ ನದಿ ನೀರು ಪೂರೈಕೆ
ಕರ್ನಾಟಕ ನೀರಾವರಿ ನಿಗಮದಡಿ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಸೊರಬ, ಶಿರಾಳಕೊಪ್ಪ ಮತ್ತು ಆನವಟ್ಟಿ ಪಟ್ಟಣ ಹೊರತು ಉಳಿದೆಡೆಗೆ ಶರಾವತಿ ನದಿ ನೀರು ಪೂರೈಕೆ ಮಾಡುವ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಲಭಿಸಿಲ್ಲ. ಅದು ದೊರತಿದ್ದರೆ ಈ ಯೋಜನೆ ಕೂಡ ಬಜೆಟ್‌ನಲ್ಲಿ ಘೋಷಣೆ ಆಗುತ್ತಿತ್ತು. ಮಾ.11ರಂದು ದಹೆಲಿಯಲ್ಲಿ ಸಭೆ ನಡೆಯಲ್ಲಿದ್ದು ಅಲ್ಲಿ ಯೋಜನೆಗೆ ಅನುಮತಿ ದೊರೆಯುವ ಸಾಧ್ಯತೆ ಇದೆ. ಇದಕ್ಕೆ ಬಜೆಟ್‌ನ ಹೊರತಾಗಿ ಅನುದಾನ ನೀಡಬಹುದಾಗಿದೆ.
ಇನ್ನು, ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣಗಳಿಗೆ ಪೈಪ್‌ಲೈನ್ ಅಳವಡಿ ಕಾರ್ಯ ಮುಗಿದ ಮೇಲೆ ಶರಾವತಿ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಈ ಕುರಿತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹೊರ ವಲಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ 62 ಕೋಟಿ ರೂ., ಕೆಎಫ್‌ಡಿ ನಿಯಂತ್ರಣ 50 ಕೋಟಿ ರೂ., ಮಲೆನಾಡು ಭಾಗದಲ್ಲಿ ಭೂಕುಸಿತ ತಡೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಜಯ್ ಕುಮಾರ್, ಕಲಗೋಡು ರತ್ನಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಜಿ.ಡಿ.ಮಂಜುನಾತ್, ಶಿ.ಜು.ಪಾಷಾ, ಕುಮರೇಶ್, ವಿನಯ್ ತಾಂಡ್ಲೆ ಸೇರಿ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್ ಸವಾರ, ಪೋಷಕರಿಗೆ ಬಿಸಿ ಮುಟ್ಟಿಸಿತು ನ್ಯಾಯಾಲಯ, ಆಗಿದ್ದೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200