ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 FEBRUARY 2024
POLITICS : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಕುಮಾರ್ ಬಂಗಾರಪ್ಪಗೆ ಗಾಳ ಹಾಕಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಬಿಜೆಪಿಯಲ್ಲಿಯೆ ಉಳಿಸಿಕೊಳ್ಳಲು ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸಹೋದರ ಮಧು ಬಂಗಾರಪ್ಪ ವಿರುದ್ಧ ಕುಮಾರ್ ಬಂಗಾರಪ್ಪ ಸೋಲನುಭವಿಸಿದ್ದರು. ಆನಂತರ ಅವರು ರಾಜಕೀಯ ವೇದಿಕೆಗಳಿಂದ ದೂರ ಉಳಿದಿದ್ದಾರೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದೂ ವಿರಳ. ಈಗ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಪ್ರಯತ್ನ ನಡೆಯುತ್ತಿದೆ.
ಕುಮಾರ್‌ಗೆ ಗಾಳ ಹಾಕಲು ಇದೆ ಕಾರಣ
ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಪ್ರಬಲ ಪೈಪೋಟಿ ಒಡ್ಡುವ ಅಭ್ಯರ್ಥಿಗಾಗಿ ಕಾಂಗ್ರೆಸ್‌ನಲ್ಲಿ ಹುಡುಕುತ್ತಿದೆ. ಗೀತಾ ಶಿವರಾಜ್‌ಕುಮಾರ್, ಸಚಿವ ಮಧು ಬಂಗಾರಪ್ಪ ಅವರ ಹೆಸರು ಚಾಲ್ತಿಯಲ್ಲಿದೆ. ಈ ಮಧ್ಯೆ ಬಂಗಾರಪ್ಪ ಅವರ ಹಿರಿಮಗ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಮರು ಸೇರಿಸಿಕೊಳ್ಳಲು ತೆರೆಮರೆ ಯತ್ನ ನಡೆಯುತ್ತಿದೆ. ಈಡಿಗ ಸಮುದಾಯದ ಪ್ರಬಲ ನಾಯಕ, ಬಂಗಾರಪ್ಪ ಪುತ್ರ, ಸೋತರೂ ಚರಿಷ್ಮಾ ಉಳಿಸಿಕೊಂಡಿರುವುದು, ಹಿಂದುಳಿದ ವರ್ಗದ ಮತ ಸೆಳೆಯಲು ಸುಲಭ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಬಂಗಾರಪ್ಪ ಕುಟುಂಬವನ್ನು ರಾಜಕೀಯವಾಗಿ ಒಂದುಗೂಡಿಸಿದರೆ ಲಾಭ ನಿಶ್ಚಿತ ಎಂಬುದು ಕಾಂಗ್ರೆಸಿಗರ ಗಟ್ಟಿ ಅಭಿಪ್ರಾಯ.
ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಮಾತುಕತೆ ನಡೆಯುತ್ತಿದೆ. ಪಕ್ಷದ ಬಿಡದಂತೆ ಯಡಿಯೂರಪ್ಪ ಅವರು ಅವರನ್ನು ಕಟ್ಟಿ ಹಾಕಿಕೊಂಡಿದ್ದಾರೆ. ನಾವು ಹಗ್ಗ ಕಟ್ಟಲು ಹೋಗಿದ್ದೆವು. ಹಗ್ಗ ಕಟ್ ಆಗಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.ಬೇಳೂರು ಗೋಪಾಲಕೃಷ್ಣ, ಅಧ್ಯಕ್ಷ, ಅರಣ್ಯ ಕೈಗಾರಿಕಾ ನಿಗಮ
ಕುಮಾರ್ ಉಳಿಸಿಕೊಳ್ಳಲು ಬಿಜೆಪಿ ಪಟ್ಟು
ಕುಮಾರ್ ಬಂಗಾರಪ್ಪ ನಾಲ್ಕು ಬಾರಿ ಸೊರಬ ಶಾಸಕರಾಗಿದ್ದರು. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು. 2018ರಲ್ಲಿ ಅನಿವಾರ್ಯ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಸೊರಬದಲ್ಲಿ ಗೆದ್ದಿದ್ದರು. ಈ ಅವಧಿಯಲ್ಲಿ ಹೆಚ್ಚು ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿಸಿದ್ದರು. ಆದರೆ ಪಕ್ಷದೊಳಗಿನ ವೈಮನಸ್ಸು ಸೇರಿದಂತೆ ನಾನಾ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಸೋಲಾಗಿತ್ತು. ಆ ಬಳಿಕ ಅವರು ಪಕ್ಷದ ಯಾವುದೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಈಗ ಕುಮಾರ್ ಬಂಗಾರಪ್ಪ ಬಿಜೆಪಿ ತೊರೆದರೆ ಲೋಕಸಭೆ ಚುನಾವಣೆಯಲ್ಲಿ ಮತ ವಿಭಜನೆಯ ಆತಂಕವಿದೆ. ಇದೆ ಕಾರಣಕ್ಕೆ ಬಿಜೆಪಿ ಮುಖಂಡರು ಅವರನ್ನು ಸೆಳೆಯುಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡುವ ಕುರಿತೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಕುಮಾರ್ ಬಂಗಾರಪ್ಪ ಅವರು ಬಿಜೆಪಿಯಲ್ಲೆ ಇದ್ದಾರೆ. ಅವರು ಬಿಜೆಪಿಯಲ್ಲೆ ಮುಂದುವರೆಯಲಿದ್ದಾರೆ. ಮಗನ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅವರನ್ನು ಕರೆತರಲಾಗುತ್ತದೆ.ಬಿ.ವೈ.ರಾಘವೇಂದ್ರ, ಸಂಸದ
ಕುಮಾರ್ ಬಂಗಾರಪ್ಪ ನಡೆ ನಿಗೂಢ
ಇವೆಲ್ಲ ರಾಜಕೀಯ ಸರ್ಕಸ್ ಮಧ್ಯೆ ಕುಮಾರ್ ಬಂಗಾರಪ್ಪ ನಡೆ ನಿಗೂಢವಾಗಿದೆ. ಸೋತ ಬಳಿಕ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿಯು ಸಕ್ರಿಯವಾಗಿಲ್ಲ. ಈ ಮೊದಲು ಅವರು ಪ್ರಕಟಿಸುತ್ತಿದ್ದ ಪ್ರತಿ ಪೋಸ್ಟ್‌ನಲ್ಲಿಯು ಬಿಜೆಪಿ ಲಾಂಛನವಿರುತ್ತಿತ್ತು. ಈಚೆಗಿನ ಹಲವು ಪೋಸ್ಟ್‌ಗಳಲ್ಲಿ ಬಿಜೆಪಿ ಲೋಗೋ ಕೂಡ ಕಣ್ಮರೆಯಾಗಿದೆ. ಇದು ಹಲವು ಚರ್ಚೆಗೆ ಹುಟ್ಟುಹಾಕಿದೆ.
ಇದನ್ನೂ ಓದಿ – ಗ್ಯಾರಂಟಿ ಯೋಜನೆಯಿಂದ ಯಾರಿಗೇನು ಲಾಭವಾಗಿದೆ? ಫಲಾನುಭವಿಗಳು ಹೇಳಿದ್ದೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422