ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2021
ಮನೆ ಬಳಿಗೆ ಬಂದಿದ್ದ ಬಿಜೆಪಿ ಮುಖಂಡರನ್ನು ಬಾಗಿಲಲ್ಲೇ ನಿಲ್ಲಿಸಿದ ಬೂತ್ ಅಧ್ಯಕ್ಷರೊಬ್ಬರು ರಾಜೀನಾಮೆ ಪತ್ರ ಕೈಗಿಟ್ಟಿದ್ದಾರೆ. ಅಲ್ಲದೆ ಇನ್ಮುಂದೆ ತಾವು ಪಕ್ಷದ ಪರವಾಗಿ ಪ್ರಚಾರ ನಡೆಸಲು ಅಸಾಧ್ಯ ಅಂತಲೂ ಕಡ್ಡಿ ಮುರಿದ ಹಾಗೆ ಹೇಳಿ ಕಳುಹಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಮಫಲಕ ಅಭಿಯಾನದ ಹಿನ್ನೆಲೆ ಇವತ್ತು ಬೆಳಗ್ಗೆ ಬಿಜೆಪಿ ಮುಖಂಡರು ನಾಮಫಲಕ ವಿತರಣೆ ಮಾಡಲು ಬೂತ್ ಅಧ್ಯಕ್ಷರ ಮನೆಗೆ ಬಂದಿದ್ದರು. ಈ ವೇಳೆ ರಾಜೀನಾಮೆ ಪತ್ರ ನೀಡಿರುವ ಬೂತ್ ಅಧ್ಯಕ್ಷರು, ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜೀನಾಮೆ ಪತ್ರದಲ್ಲೂ ಸಕಾರಣವನ್ನು ವಿವರಿಸಿದ್ದಾರೆ.
ರಾಜೀನಾಮೆ ನೀಡಿದ್ಯಾರು? ಕಾರಣವೇನು?
ಪ್ರತಿ ಬೂತ್ ಹಂತದಲ್ಲೂ ಬಿಜೆಪಿ ಕಮಿಟಿ ರಚಿಸಿದೆ. ಶಿವಮೊಗ್ಗದ ಅಶೋಕನಗರದ ಬೂತ್ ಕಮಿಟಿಯೊಂದಕ್ಕೆ ಎಲ್.ಶೇಖರ್ ಅಧ್ಯಕ್ಷರಾಗಿದ್ದರು. ಇವರ ಮನೆ ಮುಂದ ಬೂತ್ ಅಧ್ಯಕ್ಷರು ಎಂದು ನಾಮಫಲಕ ಅಂಟಿಸಲು ಬಿಜೆಪಿ ಮುಖಂಡರು ತೆರಳಿದ್ದರು. ಆಗ ತಮ್ಮ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದು, ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜೀನಾಮೆಗೆ ಕಾರಣವೇನು? ಪತ್ರದಲ್ಲೇನಿದೆ?
ಎಲ್.ಶೇಖರ್ ಅವರು ನೀಡಿರುವ ರಾಜೀನಾಮೆ ಪತ್ರದಲ್ಲಿ ಬಿಜೆಪಿ ಸರ್ಕಾರದ ಇತ್ತೀಚಿನ ಬೆಳವಣಿಗೆ ಕುರಿತು ಅಸಮಾಧನ ವ್ಯಕ್ತಪಡಿಸಿದ್ದಾರೆ.
‘ಬಿಜೆಪಿ ಪಕ್ಷ ಜನಪರ ಸರ್ಕಾರ ನೀಡಲಿದೆ ಎಂದು ನಂಬಿದ್ದೆ. ಆದರೆ ಈಗ ಗೃಹೋಪಯೋಗಿ ವಸ್ತುಗಳು, ಅಡುಗೆ ಅನಿಲ, ವಿದ್ಯುತ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದೆ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಪರವಾಗಿ ಅರಿವು ಮೂಡಿಸಲು ಜನರ ಬಳಿಗೆ ಹೋದರೆ ಉಗಿಯುತ್ತಾರೆ. ಇದರಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಎಲ್.ಶೇಖರ್ ಪತ್ರದಲ್ಲಿ ಬರೆದಿದ್ದಾರೆ.
‘ಬೂತ್ ಅಧ್ಯಕ್ಷರದ್ದು ದೊಡ್ಡ ಜವಾಬ್ದಾರಿ’
ರಾಜೀನಾಮೆ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಎಲ್.ಶೇಖರ್, ‘ಪಕ್ಷದಲ್ಲಿ ಬೂತ್ ಅಧ್ಯಕ್ಷರದ್ದು ಪ್ರಮುಖ ಜವಾಬ್ದಾರಿಯಾಗಿದೆ. ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳೇ ಜನರ ಬಳಿಗೆ ಹೋಗುವುದು. ಎಲ್ಲರೂ ಈಗ ನಮಗೆ ಬಯ್ಯುತ್ತಿದ್ದಾರೆ. ಹಾಗಾಗಿ ಬೇಜಾರಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಬೇರೆ ಸಂದರ್ಭ ಅಥವಾ ಬೇರೆ ಜಾಗದಲ್ಲಿ ರಾಜೀನಾಮೆ ಕೊಟ್ಟಿದ್ದರೆ ನಾಲ್ಕು ಜನಕ್ಕೆ ವಿಚಾರ ತಿಳಿಯುತ್ತಿರಲಿಲ್ಲ. ಅಲ್ಲದೆ ನನ್ನಿಂದಾಗಿ ಬೇರೆಯವರು ವಿಚಾರ ತಿಳಿಯುವಂತಾಗಲಿ ಅನ್ನುವ ಉದ್ದೇಶದಿಂದ ಮನೆ ಬಾಗಿಲಿಗೆ ಮುಖಂಡರು ಬಂದಾಗ ರಾಜೀನಾಮೆ ನೀಡಿದ್ದೇನೆ’ ಎಂದು ತಿಳಿಸಿದರು.
ಅಗತ್ಯ ವಸ್ತುಗಳು, ತೈಲೋತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಕಾರ್ಯಕರ್ತರು ತಳ ಹಂತದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಕಷ್ಟಪಡುವಂತಾಗಿದೆ. ಶೇಖರ್ ನಡೆ ಶಿವಮೊಗ್ಗ ನಗರ ಬಿಜೆಪಿಯೊಳಗೆ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಯು ವ್ಯಕ್ತವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200