SHIVAMOGGA LIVE NEWS | 21 AUGUST 2023
SHIMOGA : ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿದು, ಸರ್ಕಾರ ಟೇಕಾಫ್ ಆಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಗರಿಗೆದರಿದೆ. ಪಕ್ಷದ ಕಚೇರಿ ಸದಾ ಗಿಜಿಗುಡುತ್ತಿದೆ. ಮುಖಂಡರು, ಕಾರ್ಯಕರ್ತರು ಕಚೇರಿಗೆ ನಿತ್ಯ ಹಾಜರಾಗುತ್ತಿದ್ದಾರೆ. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ ಮುಂದೆ ಹೊಸ ಸವಾಲುಗಳು (Challenges) ಕೂಡ ಎದುರಾಗಿವೆ.
ಜಿಲ್ಲಾ ಕಾಂಗ್ರೆಸ್ ಮುಂದೆ 3 ಸವಾಲು
ಸವಾಲು 1 : ಪಕ್ಷ ಸೇರ್ಪಡೆಗೆ ಸಾಲುಗಟ್ಟಿದ ಮುಖಂಡರು
‘ಬಾಂಬೆ ಬಾಯ್ಸ್ʼ ಖ್ಯಾತಿಯ ಶಾಸಕರು, ಮಾಜಿ ಶಾಸಕರು ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗುವ ಕುರಿತು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಶಿವಮೊಗ್ಗದಲ್ಲಿಯು ಕಾಂಗ್ರೆಸ್ ಸೇರ್ಪಡೆಗೆ ಮುಖಂಡರು ಮುಂದಾಗಿದ್ದಾರೆ. ಮಾಜಿ ಶಾಸಕ ಆಯನೂರು ಮಂಜುನಾಥ್, ಶಿಕಾರಿಪುರದಲ್ಲಿ ವಿಧಾನಸಭೆಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಾಗರಾಜ ಗೌಡ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯ ನಾಯಕರ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಪಕ್ಷದ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ. ಇನ್ನೊಂದೆಡೆ ಸಕೆಂಡ್ ಲೈನ್ ನಾಯಕರು, ಕಾರ್ಯಕರ್ತರು ಅಧಿಕಾರರೂಢ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದು ಪಕ್ಷಕ್ಕೆ ಸವಾಲಾಗಿದೆ. ಆಯಾ ಹಂತದ ನಾಯಕರು, ಕಾರ್ಯಕರ್ತರ ಸೇರ್ಪಡೆಗೆ ಆಯಾ ಹಂತದಲ್ಲೇ ವಿರೋಧವು ಕೇಳಿ ಬಂದಿದೆ. ಇದನ್ನು ನಿಭಾಯಿಸುವುದು ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಸಮಿತಿಗೆ ತಲೆನೋವಾಗಿದೆ.
ಸವಾಲು 2 : ನಿಗಮ ಮಂಡಳಿ ಮೇಲೆ ಕಣ್ಣು
ನಿಗಮ – ಮಂಡಳಿಗಳಿಗೆ ನೇಮಕಾತಿ ಬಾಕಿ ಇದೆ. ಸರ್ಕಾರಕ್ಕು ಇದು ದೊಡ್ಡ ಸವಾಲಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ನಿಗಮ ಮಂಡಳಿಗಳಿಗೆ ಯಾರನ್ನು ನೇಮಿಸಿದರು ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವುದು ಸಹಜ. ಆದರೆ ಲಾಭಿ ಮಾತ್ರ ಜೋರಾಗಿದೆ. ನಿಗಮ – ಮಂಡಳಿ ಸ್ಥಾನಮಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಇದೆ. ಹಲವು ಮುಖಂಡರು ಶಿವಮೊಗ್ಗ ತೊರೆದು ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಈಗ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಮುಖಂಡರು, ಸಕೆಂಡ್ ಲೈನ್ ಲೀಡರ್‌ಗಳ ಕಣ್ಣು ಈ ಸ್ಥಾನಮಾನದ ಮೇಲಿರುವುದು ಸುಳ್ಳಲ್ಲ.
ಸವಾಲು 3 : ಅಭ್ಯರ್ಥಿಗಳ ಆಯ್ಕೆ
ಮುಂದೆ ಸಾಲು ಸಾಲು ಚುನಾವಣೆಗಳಿದ್ದು ಟಿಕೆಟ್ ಆಕಾಂಕ್ಷಿಗಳು ಕೂಡ ಪಕ್ಷದಲ್ಲಿ ಸಾಲುಗಟ್ಟಿದ್ದಾರೆ. ವಿಧಾನ ಪರಿಷತ್, ಲೋಕಸಭೆ ಚುನಾವಣೆಗೆ ಈಗಾಗಲೇ ಅಕಾಂಕ್ಷಿಗಳು ರೆಡಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಗೀತಾ ಶಿವರಾಜ್ ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಕೂಡ ಅಕಾಂಕ್ಷಿ ಎಂದು ತಿಳಿಸಿದ್ದಾರೆ. ಇವುಗಳ ನಡುವೆ ಇನ್ನಷ್ಟು ಹೆಸರುಗಳು ಗಿರಕಿ ಹೊಡೆಯುತ್ತಿವೆ. ಈಡಿಗ ಅಥವಾ ವೀರಶೈವ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಚರ್ಚೆಯಾಗಿದೆ. ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂಬ ಆಗ್ರಹವು ಕೇಳಿ ಬಂದಿದೆ. ಈ ಮಧ್ಯೆ, ನೈಋತ್ಯ ಪದವೀಧರ ಕ್ಷೇತ್ರದ ಚನಾವಣೆಗೆ ಸ್ಪರ್ಧಿಸಲು ಈಗಾಗಲೆ ಎಸ್.ಪಿ.ದಿನೇಶ್ ಅರ್ಜಿ ಸಲ್ಲಿಸಿದ್ದಾರೆ. ಇನ್ನೇನು ಮಹಾನಗರ ಪಾಲಿಕೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಇವುಗಳಿಗು ಆಕಾಂಕ್ಷಿಗಳು ಸಿದ್ಧವಾಗಿದ್ದಾರೆ. ಇವರನ್ನು ನಿಭಾಯಿಸುವುದೆ ಜಿಲ್ಲಾ ಕಾಂಗ್ರೆಸ್‌ಗೆ ದೊಡ್ಡ ಸವಲಾಗಿದೆ.
ಇದನ್ನೂ ಓದಿ – ‘ಚಳಿಗಾಲದಲ್ಲಿ ಬಿಜೆಪಿ, ಬೇಸಿಗೆಯಲ್ಲಿ ಜೆಡಿಎಸ್, ಮಳೆಗಾಲದಲ್ಲಿ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ’, ಆಯನೂರು ವಿರುದ್ಧ ಗರಂ
ಒಗ್ಗಟ್ಟಿನ ಮಂತ್ರ ಅನಿವಾರ್ಯ
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಹುರುಪಿನಲ್ಲಿದೆ. ಹಾಗಾಗಿ ಎಲ್ಲಾ ಜಿಲ್ಲಾ ಘಟಕಗಳಿಗು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಸಾಲು ಸಾಲು ಸವಾಲುಗಳ ಮಧ್ಯೆ ಒಗ್ಗಟ್ಟಿನಿಂದ ಹೆಜ್ಜೆ ಹಾಕುವುದು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200