ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 FEBRUARY 2021
ಹಾವು, ಚೇಳುಗಳು ಯಡಿಯೂರಪ್ಪ ಅವರ ಕುಟುಂಬದಲ್ಲೇ ಇದ್ದಾವೆ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ನಾನು ಹಾವು ಚೇಳು ಅಂತಾ ಉಲ್ಲೇಖ ಮಾಡಿದ್ದು ರಾಜಕೀಯ ವಿರೋಧಿಗಳಿಗೆ. ಡಿವಿಜಿಯವರು ಕಾಯಲು ಮೇಲೊಬ್ಬನಿರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದೇಕೆ ಎಂದು ಹೇಳಿದ್ದಾರೆ. ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನಿಡುವುದಿಲ್ಲ ಎಂದು ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದರು.
ಮಸ್ಕಿ ಜವಾಬ್ದಾರಿ, ಗೆಲುವು ನಿಶ್ಚಿತ
ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಸದ್ಯದಲ್ಲೇ ಉಪ ಚುನಾವಣೆ ಘೋಷಣೆ ಆಗಲಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮಗೆ ಮಸ್ಕಿ ಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ. ಈ ಹಿಂದೆ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಹಾಗೆ ಈ ಬಾರಿಯೂ ಗೆಲುವು ಸಾಧಿಸಲಿದೆ. ಮತದಾರರು ಯಡಿಯೂರಪ್ಪ ಅವರ ಕೈ ಬಲಪಡಿಸಲಿದ್ದಾರೆ ಎಂದರು.
ಕುಮಾರಸ್ವಾಮಿ ಅವರನ್ನು ಜನ ಮರೆತಿದ್ದರು
ರಾಮ ಮಂದಿರ ನಿಧಿಗೆ ದೇಣಿಗೆ ನೀಡದ ಮನೆಗಳನ್ನು ಗುರುತು ಹಾಕಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಕಳೆದ ಎರಡು ವರ್ಷದಿಂದ ರಾಜ್ಯದ ಜನರು ಕುಮಾರಸ್ವಾಮಿ ಅವರನ್ನು ಮರೆತಿದ್ದರು. ಜನರಿಗೆ ನೆನಪು ಮಾಡಲು ಈ ರೀತಿ ಹೇಳಿಕೆ ನೀಡಿರಬಹುದು. ಅದರೆ ಅವರ ಹೇಳಿಕೆಯನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದರು.
ವರ್ಗಾವಣೆ ವಿಚಾರಕ್ಕೂ ನಂಗೂ ಸಂಬಂಧವಿಲ್ಲ
ಐಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ವರ್ಗಾವಣೆ ಪ್ರಕ್ರಿಯೆಗಳು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ನಾನು ಬಿಜೆಪಿ ಪಕ್ಷದ ಉಪಾಧ್ಯಕ್ಷ. ಹಾಗಾಗಿ ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಮೀಸಲಾತಿ ಬಗ್ಗೆ ತಜ್ಞರ ಜೊತೆ ಚರ್ಚೆ
ನಮ್ಮ ಸರ್ಕಾರ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ, ಬೇಡಿಕೆಗಳ ವಿರುದ್ಧ ಇಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಕುರಿತು ತಜ್ಞರ ಜೊತೆ ಸಿಎಂ ಅವರು ಚರ್ಚೆ ನಡೆಸಿ, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ವಿಜಯೇಂದ್ರ ತಿಳಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422