ಸಚಿವ ಸಂಪುಟ ಕಸರತ್ತು: ಶಿವಮೊಗ್ಗದಲ್ಲಿ ‘ಕಡೇ ಕ್ಷಣದ ಬದಲಾವಣೆ’ ಕುರಿತ ಚರ್ಚೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಂಪುಟದಲ್ಲಿ ಖಾಲಿ ಇರುವ 20 ಸಚಿವ ಸ್ಥಾನಗಳ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಕೊನೆಯ ಹಂತದ ಲಾಬಿ ಬಿರುಸಾಗಿದೆ. ಇದರ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ‘ಕಡೇ ಕ್ಷಣದ ಬದಲಾವಣೆ’ ಕುರಿತಾದ ಚರ್ಚೆಗಳು ಭಾರಿ ಕುತೂಹಲ ಮೂಡಿಸಿವೆ.

ನಾಲ್ವರಿಗೆ ಮಿನಿಸ್ಟರ್‌ ಆಗುವ ಅರ್ಹತೆ

ಡಿ.ಕೆ. ಶಿವಕುಮಾರ್ ಸಂಪುಟ ಸೇರಲು ಶಿವಮೊಗ್ಗ ಜಿಲ್ಲೆಯ ಕೋಟಾದಡಿ ನಾಲ್ವರು ನಾಯಕರು ಅರ್ಹರಾಗಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ಸೊರಬ ಶಾಸಕ ಎಸ್. ಮಧು ಬಂಗಾರಪ್ಪ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ವಿಧಾನ ಪರಿಷತ್‌ ಸದಸ್ಯೆ ಬಲ್ಕಿಸ್‌ ಬಾನು ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಒಲಿಯಲಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ದೆಹಲಿ ಮಟ್ಟದಲ್ಲಿ ಲಾಬಿ

ಸಚಿವಾಕಾಂಕ್ಷಿ ನಾಯಕರು ಈಗಾಗಲೇ ದೆಹಲಿ ಯಾತ್ರೆ ನಡೆಸಿ ಹೈಕಮಾಂಡ್‌ನ ಪ್ರಮುಖ ನಾಯಕರಿಗೆ ತಮ್ಮ ಮನವಿ ತಲುಪಿಸಿದ್ದಾರೆ. ಆಪ್ತ ನಾಯಕರ ಮೂಲಕ ತಮಗೆ ಸ್ಥಾನ ಸಿಗುವಂತೆ ಗರಿಷ್ಠ ಪ್ರಯತ್ನ ನಡೆಸಿದ್ದಾರೆ. ಇನ್ನೊಂದೆಡೆ ಆಯಾ ನಾಯಕರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹೈಕಮಾಂಡ್‌ ನಾಯಕರನ್ನು ಟ್ಯಾಗ್ ಮಾಡಿ, ತಮ್ಮ ಶಾಸಕರಿಗೇ ಸಚಿವ ಸ್ಥಾನ ನೀಡಬೇಕೆಂದು ಪೋಸ್ಟರ್‌ಗಳನ್ನು ಅಪ್‌ಲೋಡ್ ಮಾಡುವ ಮೂಲಕ ಒತ್ತಡ ಸೃಷ್ಟಿಸುತ್ತಿದ್ದಾರೆ.

BK-Sangameshwar-Madhu-Bangarappa-and-Beluru-Gopalakrishna

ಏನಿದು ಕಡೇ ಕ್ಷಣದ ಚರ್ಚೆ?

ಪ್ರಸ್ತುತ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆ ಮುನ್ನೆಲೆಗೆ ಬಂದಿದೆ. ‘ತಮ್ಮ ಶಾಸಕರೇ ಸಚಿವರಾಗುವುದು ಖಚಿತ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಕಡೇ ಕ್ಷಣದಲ್ಲಿ ಏನಾದರೂ ರಾಜಕೀಯ ಬದಲಾವಣೆಯಾದರೆ ಮಾತ್ರ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಲಾಟರಿ ಹೊಡೆಯಲಿದೆ’ ಎಂದು ಬೆಂಬಲಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಯಲ್ಲಿ ಶಿವಮೊಗ್ಗದ ಪಾಲಿಗೆ ‘ಕಡೇ ಕ್ಷಣದ ಬದಲಾವಣೆ’ ಆಟ ನಡೆಯಲಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಬಿರುಸಾಗಿದೆ.