SHIVAMOGGA: ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಸೇರಲು ಶಿವಮೊಗ್ಗ ಜಿಲ್ಲೆಯ ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮಾಜಿ ಸಚಿವ ಮಧು ಬಂಗಾರಪ್ಪ ಅವರ ಹೆಸರು ಕೆಲವು ಟಿವಿ ವಾಹನಿಗಳ ಸಂಭಾವ್ಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮೂರು ವರ್ಷಗಳ ಕಾಲ ಶಿಕ್ಷಣ ಇಲಾಖೆ ಜವಾಬ್ದಾರಿ ನಿಭಾಯಿಸಿದ್ದ ಮಧು ಬಂಗಾರಪ್ಪ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.

ಮತ್ತೆ ಮಿನಿಸ್ಟರ್ ಆಗ್ತಾರಾ ಮಧು ಬಂಗಾರಪ್ಪ?
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಎಂಬುದು ಮಧು ಬಂಗಾರಪ್ಪ ಅವರಿಗಿರುವ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಡಿ.ಕೆ.ಶಿವಕುಮಾರ್ ಅವರು ಬಂಗಾರಪ್ಪ ಅವರನ್ನು ತಮ್ಮ ರಾಜಕೀಯ ಗುರು ಎಂದು ಘೋಷಿಸಿಕೊಂಡಿದ್ದರು. ಅವರ ಸಂಪುಟದಲ್ಲೇ ಡಿಕೆಶಿ ಮೊದಲ ಬಾರಿಗೆ ಸಚಿವರಾಗಿದ್ದರು. ಈ ರಾಜಕೀಯ ನಂಟು ಮಧು ಬಂಗಾರಪ್ಪ ಅವರಿಗೆ ಪುನಃ ಸಚಿವ ಸ್ಥಾನ ತಂದುಕೊಡಬಹುದು ಎಂಬ ಲೆಕ್ಕಾಚಾರವಿದೆ.
ರಾಜ್ಯದ ಅತಿ ದೊಡ್ಡ ಖಾತೆಯಾದ ಶಿಕ್ಷಣ ಇಲಾಖೆಯನ್ನು ಮೂರು ವರ್ಷಗಳ ಕಾಲ ನಿಭಾಯಿಸಿದ ಸಚಿವ ಸ್ಥಾನದ ಅನುಭವವು ಮಧು ಬಂಗಾರಪ್ಪ ಅವರಿಗಿದೆ. ಈ ಅನುಭವ ಪುನಃ ಸಂಪುಟ ಸೇರಲು ನೆರವಾಗಬಹುದಾಗಿದೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಪಟ್ಟದ ಪೈಪೋಟಿಯ ಸಂದರ್ಭ ಮಧು ಬಂಗಾರಪ್ಪ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ತಟಸ್ಥವಾಗಿ ಉಳಿದಿದ್ದರು. ಇದು ಅವರಿಗೆ ಪೂರಕವಾಗಿ ಪರಿಣಮಿಸಿದೆ. ಸದ್ಯ ಬೆಂಗಳೂರಲ್ಲೇ ಬೀಡು ಬಿಟ್ಟಿರುವ ಮಧು ಬಂಗಾರಪ್ಪ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಹೈಕಮಾಂಡ್ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದರೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯೂ ಇದೆ. ಅದರೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ಸಿಗುವ ಸಂಭವವಿದೆ ಎಂದು ವರದಿಯಾಗುತ್ತಿದೆ.
