ಶಿವಮೊಗ್ಗ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‌ನ 65ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಆರ್. ಪ್ರಸನ್ನಕುಮಾರ್, ‘ಇದು ಕೇವಲ ಸಂಘಟನೆಯ ಸಂಸ್ಥಾಪಕ ದಿನವಲ್ಲ, ದೇಶದ ಯುವಕರ ಧ್ವನಿಗೆ ರಾಜಕೀಯ ವೇದಿಕೆ ದೊರೆತ ದಿನ. ಯುವ ಕಾಂಗ್ರೆಸ್ ಎಂದರೆ ಹೋರಾಟ, ಸೇವೆ, ಸಾಮಾಜಿಕ ನ್ಯಾಯ ಹಾಗೂ ದೇಶದ ಭವಿಷ್ಯ ಕಟ್ಟುವ ಯುವ ಶಕ್ತಿ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ‘ದೇಶದ ಇತಿಹಾಸದಲ್ಲಿ ಅನೇಕ ಮಹತ್ವದ ಬದಲಾವಣೆಗಳ ಹಿಂದೆ ಯುವಕರ ಶಕ್ತಿಯಿದೆ. ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕಾರ್ಯಕರ್ತರು ಬೀದಿಗಿಳಿದು ಹೋರಾಡಿದಾಗಲೇ ಹಕ್ಕುಗಳು ದೊರೆತಿವೆ’ ಎಂದರು.
ಹೆಚ್.ಸಿ. ಯೋಗೇಶ್ ಮಾತನಾಡಿ, ‘ಉದ್ಯೋಗದ ಕೊರತೆ, ಬೆಲೆ ಏರಿಕೆ, ರೈತರ ಸಂಕಷ್ಟದಂತಹ ಸಮಸ್ಯೆಗಳ ವಿರುದ್ಧ ಯುವ ಕಾಂಗ್ರೆಸ್ ಸದಾ ಜನರ ಪರ ಧ್ವನಿ ಎತ್ತಬೇಕು. ಕೇವಲ ಚುನಾವಣಾ ಕಾಲದಲ್ಲಿ ಕಾಣಿಸಿಕೊಳ್ಳದೆ, ವಿದ್ಯಾರ್ಥಿಗಳಿಗೆ, ಉದ್ಯೋಗ ವಂಚಿತರಿಗೆ ಮತ್ತು ಬಡವರಿಗೆ ಅನ್ಯಾಯವಾದಾಗ ಅವರ ಧ್ವನಿಯಾಗಬೇಕು’ ಎಂದು ತಿಳಿಸಿದರು.
ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವಿಕುಮಾರ್, ಯುವ ಮುಖಂಡ ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್, ನಗರ ಅಧ್ಯಕ್ಷ ಚರಣ್, ಬ್ಲಾಕ್ ಅಧ್ಯಕ್ಷ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲಗೊಪ್ಪ ಶಿವು, ಅಬ್ದುಲ್, ಧನರಾಜ್, ಪದಾಧಿಕಾರಿಗಳು ಉಪಸ್ಥಿತರಿದ್ದರು.