ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
NODI SWAMY, 16 AUGUST 2024 : ಶಿವಪ್ಪನಾಯಕ ಪ್ರತಿಮೆ, ಶಿವಮೊಗ್ಗದ ಪ್ರಮುಖ ಲ್ಯಾಂಡ್ ಮಾರ್ಕ್. ಇದರ ಮುಂದೆ ಯಾವಾಗಲೂ ಸ್ವಾತಂತ್ರ ಹೋರಾಟಗಾರರು, ಪ್ರಮುಖ ವ್ಯಕ್ತಿಗಳ ಫೋಟೊ ಮತ್ತು ಕಿರು ಪರಿಚಯದ ಬೋರ್ಡ್ (Board) ಇರುತ್ತದೆ. ಬಹುತೇಕರು ಮಹಾನಗರ ಪಾಲಿಕೆಯೇ ಈ ಬೋರ್ಡ್ ಹಾಕುತ್ತದೆ ಎಂದು ನಂಬಿಕೊಂಡಿದ್ದಾರೆ. ಆದರೆ ವಾಸ್ತವವೆ ಬೇರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪ್ರಮುಖರ ಹುಟ್ಟುಹಬ್ಬಕ್ಕೆ ಬೋರ್ಡ್ ಅತ್ಯಂತ ಹೆಚ್ಚು ಜನ, ವಾಹನ ದಟ್ಟಣೆ ಇರುವ ಜಾಗದಲ್ಲಿ ಶಿವಪ್ಪನಾಯಕ ಪ್ರತಿಮೆ ಇದೆ. ಪ್ರತಿಮೆಯ ಸುತ್ತಲು ಕಬ್ಬಿಣದ ರೇಲಿಂಗ್ ಹಾಕಲಾಗಿದೆ. ರಾತ್ರಿ ಕಳೆದು ಬೆಳೆಗಾಗುವುದರಲ್ಲಿ ಈ ರೇಲಿಂಗ್ ಕಂಬದಲ್ಲಿ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ಸಾಧಕರ ಫೋಟೊ, ಮಾಹಿತಿಯುಳ್ಳ ಫಲಕ ಪ್ರತ್ಯಕ್ಷವಾಗಲಿದೆ. ಸಾಮಾನ್ಯವಾಗಿ ಸಾಧಕರ ಹುಟ್ಟುಹಬ್ಬದ ದಿನವೇ ಇಲ್ಲಿ ಈ ಫಲಕ ಕಾಣುತ್ತದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಓದು, ಬರಹ ಗೊತ್ತಿಲ್ಲದ ತಮಿಳು ಭಾಷಿಕನ ಸೇವೆ
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು, ಸಾಧಕರ ಸಾಹಸ ಗಾಥೆ ಎಲ್ಲರಿಗು ತಿಳಿಯಲಿ ಅಂತಾ ಕಾರ್ಪೆಂಟರ್ ಕೆ.ಕುಮಾರ್ ಎಂಬುವವರು ಈ ಫಲಕಗಳನ್ನು ಹಾಕುತ್ತಿದ್ದಾರೆ. ಕೆ.ಕುಮಾರ್ ಅವರದ್ದು ಪ್ರಚಾರ ರಹಿತ ನಿಸ್ವಾರ್ಥ ಸೇವೆ.
‘ನಾನು ತಮಿಳು ಮೀಡಿಯಂನಲ್ಲಿ ಐದನೆ ಕ್ಲಾಸ್ ತನಕ ಮಾತ್ರ ಓದಿದ್ದೇನೆ. ಕನ್ನಡ ಓದಲು, ಬರೆಯಲು ಬರುವುದಿಲ್ಲ. ಮಾತನಾಡುತ್ತೇನೆ. ಜೀವನ್ಕಕಾಗಿ ಕಾರ್ಪೆಂಟರ್ ಕೆಲಸ ಆರಂಭಿಸಿದೆ. ನಮ್ಮ ಜನರಿಗೆ ಪ್ರಮುಖ ವ್ಯಕ್ತಿಗಳ ಕುರಿತು ಮಾಹಿತಿ ತಿಳಿದಿರಲಿ ಅಂತಾ ಫಲಕ ಹಾಕುತ್ತಿದ್ದೇನೆ. ಪ್ರಮುಖ ವ್ಯಕ್ತಿಗಳ ಹುಟ್ಟುಹಬ್ಬದಂದು ಫಲಕ ಹಾಕುತ್ತೇನೆ. ಅದರಲ್ಲಿ ಅವರ ಫೋಟೊ, ಜನ್ಮ ದಿನಾಂಕ, ಅವರ ಸಾಧನೆ ಕುರಿತ ಒಂದೆರಡು ಸಾಲು ಇರಲಿದೆʼ ಅನ್ನುತ್ತಾರೆ ಕುಮಾರ್.
ಸಣ್ಣ ಫೋಟೊದಿಂದ ಫಲಕ, ಫ್ಲೆಕ್ಸ್ವರೆಗೆ ಮೊದಲಿನಿಂದಲು ಕೆ.ಕುಮಾರ್ ಅವರಿಗೆ ಸಾಧಕರು, ದೇಶಕ್ಕಾಗಿ ಮಡಿದವರ ಜೀವನಚರಿತ್ರೆ ತಿಳಿಯುವ ಕುತೂಹಲ. ಹಾಗಾಗಿ ಮಂಜುನಾಥ ಟಾಕೀಸ್ ಬಳಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾಗ ಅಂಗಡಿಯಲ್ಲಿ ಸ್ವಾತಂತ್ರ ಹೋರಾಟಗಾರರ ಫೋಟೊಗಳನ್ನು ಸಂಗ್ರಹಿಸಿ ಇಟ್ಟಿದ್ದರು. ‘ಮೊದಲು ಪೋಸ್ಟ್ ಕಾರ್ಡ್ ಸೈಸ್ನಲ್ಲಿ ಫೋಟೊ, ಮಾಹಿತಿ ಬರೆಯಿಸಿ ಅಂಗಡಿ ಮುಂದೆ ಹಾಕಿಸುತ್ತಿದ್ದೆ. ಎದುರಿಗೆ ಮಂಡಕ್ಕಿ ಅಂಗಡಿಗೆ ಬರುತ್ತಿದ್ದ ಗ್ರಾಹಕರು ಕಾರ್ಡ್ ಓದುತ್ತಿದ್ದರು. ಇನ್ನು ಹೆಚ್ಚು ಜನಕ್ಕೆ ಮಾಹಿತಿ ತಲುಪಿಸುವ ಉದ್ದೇಶದಿಂದ, ಸ್ನೇಹಿತರ ಸಲಹೆ ಪಡೆದು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಫಲಕ ಹಾಕಲು ಆರಂಭಿಸಿದೆ.ʼ ಅನ್ನುತ್ತಾರೆ ಕುಮಾರ್. ಈಗ ಸ್ವತಂತ್ರ್ಯ ದಿನಾಚರಣೆ ಸೇರಿದಂತೆ ವಿಶೇಷ ಸಂದರ್ಭ ಫ್ಲೆಕ್ಸ್ಗಳನ್ನು ಕೂಡ ಹಾಕುತ್ತಾರೆ ಕುಮಾರ್.
ಕುಮಾರ್ ಅವರಿಗೆ ಓದು, ಬರಹ ಗೊತ್ತಿಲ್ಲ. ಆದರೆ ಓದು, ಬರಹ ಬಲ್ಲವರಿಂದ ಸ್ವತಂತ್ರ ಹೋರಾಟಗಾರರ ಕುರಿತು ಒಂದೆರಡು ಸಾಲ ಬರೆಸಿಕೊಳ್ಳುತ್ತಾರೆ. ಆರ್ಟಿಸ್ಟ್ ಒಬ್ಬರಿಂದ ಫಲಕ ಬರೆಸುತ್ತಾರೆ. ಫೋಟೊ ಅಂಟಿಸಿ ಅದನ್ನು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಕಟ್ಟುತ್ತಾರೆ. ‘ಚೌಹಾಣ್ ಅಂತಾ ಆರ್ಟಿಸ್ಟ್ ಇದ್ದಾರೆ. ಅವರು ಈತನಕ ಸುಮಾರು 400 ಫಲಕ ಬರೆದುಕೊಟ್ಟಿದ್ದಾರೆ. ನಿಮ್ಮ ಸೇವೆ ಜೊತೆಗೆ ಕೈ ಜೋಡಿಸುತ್ತೇವೆ ಅಂತಾ ಉಚಿತವಾಗಿ ಬರೆದುಕೊಡುತ್ತಿದ್ದಾರೆ. ಆರಾಧಕ ಗ್ರಾಫಿಕ್ಸ್ನವರು ನಮಗೆ ಕಡಿಮೆ ದರಕ್ಕೆ ಫ್ಲೆಕ್ಸ್ ಮಾಡಿ ಕೊಡುತ್ತಾರೆ. ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನನ್ನ ಸ್ನೇಹಿತರಾದ ರಜನಿ ಎಂಬುವವರು ಬೋರ್ಡ್ ಹಾಕುತ್ತಾರೆ. ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಬೋರ್ಡ್ ಕೊಟ್ಟಿದ್ದೇನೆʼ ಅಂತಾ ತಮಗೆ ನೆರವಾದವರನ್ನು ಸ್ಮರಿಸುತ್ತಾರೆ ಕೆ.ಕುಮಾರ್.ಕೇಳಿ, ತಿಳಿದು ಮಾಹಿತಿ ಬರೆಸುತ್ತಾರೆ
ಹುಡುಕಿ ಬಂದವರು ಒಬ್ಬಿಬ್ಬರಲ್ಲ
ಶಿವಪ್ಪನಾಯಕ ಪ್ರತಿಮೆ ಮುಂಭಾಗ ರಾತ್ರೋರಾತ್ರಿ ಫಲಕ ಪ್ರಕಟವಾಗುವುದನ್ನು ಕಂಡು ಹಲವರು ಕುತೂಹಲಗೊಂಡಿದ್ದರು. ರೆಡ್ ಕ್ರಾಸ್ನಲ್ಲಿದ್ದ ಪಿಂಟೋ ಎಂಬುವವರು ಸತತ ಒಂದು ವರ್ಷ ಹುಡುಕಾಡಿ, ಒಮ್ಮೆ ರಾತ್ರಿ ಫಲಕ ಕಟ್ಟುವಾಗ ಬಂದು ಕುಮಾರ್ ಅವರನ್ನು ಪರಿಚಯ ಮಾಡಿಕೊಂಡಿದ್ದರಂತೆ. ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿ ಹುಡುಕಿ ಬಂದು ಧನ್ಯವಾದ ತಿಳಿಸಿದ್ದರಂತೆ.
ಎಲೆಮರೆಕಾಯಿಂತೆ ಇರುವ ಕೆ.ಕುಮಾರ್ ಅವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ. ತನಗೆ ಓದು, ಬರಹ ಗೊತ್ತಿಲ್ಲದಿದ್ದರು ಹೋರಾಟಗಾರರ, ಸಾಧಕರ ಮಾಹಿತಿಯನ್ನು ಜನರಿಗೆ ತಲುಪಿಸುವ ಅವರ ಪ್ರಯತ್ನಕ್ಕೆ ಶಿವಮೊಗ್ಗದ ಜನರು ಸ್ಮರಿಸಲೆಬೇಕು.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್