ಶಿವಮೊಗ್ಗದ ಪ್ರವಾಸಿ ತಾಣಗಳು, ಜಿಲ್ಲಾಧಿಕಾರಿ ಕಟ್ಟುನಿಟ್ಟು ಸೂಚನೆ, ಏನೇನದು? ಇಲ್ಲಿದೆ ಪಾಯಿಂಟ್ಸ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮಳೆ ಆರಂಭವಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕಟ್ಟುನಿಟ್ಟು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ. ಏನೇನು ಸೂಚನೆ ನೀಡಿದ್ದಾರೆ?

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷತೆ, ಭದ್ರತೆ ಮತ್ತು ಅಪಘಾತ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಮಲೆನಾಡು ಭಾಗದ ನದಿಗಳು, ಜಲಪಾತಗಳು, ಅಣೆಕಟ್ಟುಗಳು, ಹಿನ್ನೀರು ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ಹಾಗೂ ಗುಡ್ಡ ಕುಸಿತದ ಅಪಾಯಗಳಿರುವುದರಿಂದ ಜೀವ ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಇಲಾಖೆಗಳು ಜಂಟಿಯಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Shimoga-DC-Prabhulinga-Kavalikatti

ಡಿಸಿ ಆದೇಶಗಳೇನು? ಇಲ್ಲಿದೆ ಪಾಯಿಂಟ್ಸ್‌

point-1ಅಪಾಯಕಾರಿ ಸ್ಥಳಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ‘ಅಪಾಯ ಪ್ರದೇಶ’, ‘ನೀರಿನಲ್ಲಿ ಇಳಿಯಬೇಡಿ’, ‘ಸೆಲ್ಫಿ ಅಪಾಯಕಾರಿ’ ಎಂಬ ನಾಮಫಲಕ ಅಳವಡಿಸುವುದು ಕಡ್ಡಾಯ.

point-2ಜಲಪಾತಗಳ ಅಂಚು, ಆಳವಾದ ನೀರಿನ ಪ್ರದೇಶ ಹಾಗೂ ಜಾರಿ ಬೀಳುವ ಸಾಧ್ಯತೆ ಇರುವ ವೀಕ್ಷಣಾ ಸ್ಥಳಗಳಲ್ಲಿ ಬ್ಯಾರಿಕೇಡ್ ಮತ್ತು ಸುರಕ್ಷತಾ ಬೇಲಿ ನಿರ್ಮಿಸಬೇಕು.

point-3ನಿಷೇಧಿತ ಪ್ರದೇಶ ಪ್ರವೇಶ, ಈಜುವುದು, ಅಪಾಯಕಾರಿ ಸೆಲ್ಫಿ, ರೀಲ್ಸ್ ಮಾಡುವುದು ಹಾಗೂ ಮದ್ಯಪಾನ ಮಾಡಿ ಬರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

point-4ಹವಾಮಾನ ಇಲಾಖೆಯು ‘ಆರೆಂಜ್’ ಅಥವಾ ‘ರೆಡ್’ ಅಲರ್ಟ್ ನೀಡಿದಾಗ ಜಲಪಾತಗಳು ಮತ್ತು ಟ್ರೆಕ್ಕಿಂಗ್ ಮಾರ್ಗಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು. ಅರಣ್ಯ ಇಲಾಖೆ ಅನುಮತಿಯಿಲ್ಲದೆ ಅನಧಿಕೃತ ಟ್ರೆಕ್ಕಿಂಗ್ ಹಾಗೂ ಕ್ಯಾಂಪಿಂಗ್ ಮಾಡುವಂತಿಲ್ಲ.

point-5ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚುವರಿ ಪೊಲೀಸ್ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಅಗ್ನಿಶಾಮಕ ಇಲಾಖೆ ವತಿಯಿಂದ ತುರ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು. ಪ್ರವಾಸಿ ತಾಣಗಳ ಬಳಿ ಆಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಲಿದೆ.

point-6ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛತೆ, ಶೌಚಾಲಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ನೋಡಿಕೊಳ್ಳಬೇಕು. ರಸ್ತೆ ಗುಂಡಿ ಹಾಗೂ ಭೂಕುಸಿತದ ಅಪಾಯವಿರುವ ಜಾಗಗಳನ್ನು ತಕ್ಷಣ ಸರಿಪಡಿಸಬೇಕು.

point-7ಹೋಂಸ್ಟೇ, ರೆಸಾರ್ಟ್‌ಗಳು ಪ್ರವಾಸಿಗರಿಗೆ ಮಳೆಗಾಲದ ಸುರಕ್ಷತಾ ನಿಯಮಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ರಾತ್ರಿ ವೇಳೆ ಅಪಾಯಕಾರಿ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ತುರ್ತು ದೂರವಾಣಿ ಸಂಖ್ಯೆಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.