ಹಾವು ಕಡಿದಾಗ ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ತಜ್ಞ ವೈದ್ಯರ ಸಲಹೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಹಾವು ಕಡಿತ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಮಳೆಗಾಲದಲ್ಲಿ ಇಂತಹ ಪ್ರಕರಣ ಹೆಚ್ಚು. ಹಾವು ಕಡಿತದ ಸಂದರ್ಭ ಏನೆಲ್ಲ ಮಾಡಬಾರದು ಎಂಬುದನ್ನು ಸವಿಸ್ತಾರವಾಗಿ ಮನದಟ್ಟು ಮಾಡಿದ್ದಾರೆ ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ. ಪ್ರಶಾಂತ್‌.ಕೆ. ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಆರೋಗ್ಯ ಸಲಹೆ: ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವುಗಳ ಕಾಟ ಹೆಚ್ಚಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಭಾರೀ ಮಳೆಯಿಂದ ಅವುಗಳ ನೆಲದಡಿಯ ಬಿಲಗಳು ನೀರಿನಿಂದ ತುಂಬಿ ಹೋಗುವುದು. ಮನೆ ಕಳೆದುಕೊಂಡ ಹಾವುಗಳು ಒಣಗಿದ, ಎತ್ತರದ ಪ್ರದೇಶಗಳನ್ನು ಹುಡುಕಿಕೊಂಡು ಹೊರಬರುತ್ತವೆ. ತೆರೆದ ರಸ್ತೆಗಳು ಮತ್ತು ದಾರಿಗಳ ಮೇಲೆ ಬೆಚ್ಚಗಾಗಲು ಬರುತ್ತವೆ. ಜೊತೆಗೆ ಮಳೆಗಾಲದಲ್ಲಿ ಸಕ್ರಿಯವಾಗುವ ಕಪ್ಪೆ, ಇಲಿ ಮುಂತಾದ ಬೇಟೆ ಪ್ರಾಣಿಗಳನ್ನು ಹುಡುಕಿಕೊಂಡು ಅವು ಓಡಾಡುತ್ತವೆ. ಹೀಗಾಗಿ ಈ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಕಾಣಸಿಗುತ್ತವೆ. ಇಂತಹ ಸಂದರ್ಭದಲ್ಲೇ ಹಾವು ಕಡಿತ ಪ್ರಕರಣಗಳು ಹೆಚ್ಚುತ್ತವೆ.

Sringeri-Abhinava-vidyathirtha-multispeciality-hospital-dr-Prashanth-k

ಹಾವು ಕಡಿದರೆ ತಕ್ಷಣ ಏನು ಮಾಡಬೇಕು?

ಹಾವು ಕಡಿದರೆ ಗಾಬರಿಯಾಗದೆ ಈ ಕ್ರಮಗಳನ್ನು ಅನುಸರಿಸಿ. ಮೊದಲು ಹಾವಿನಿಂದ ಹಲವು ಹೆಜ್ಜೆ ದೂರ ಸರಿಯಿರಿ, ಇದರಿಂದ ಮತ್ತೆ ಕಡಿಯುವುದನ್ನು ತಪ್ಪಿಸಬಹುದು. ಕೂಡಲೇ 108ಗೆ ಕರೆ ಮಾಡಿ ಅಥವಾ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿ. ಕಡಿತಕ್ಕೊಳಗಾದ ವ್ಯಕ್ತಿಯನ್ನು ನಡೆಯಲು ಬಿಡಬೇಡಿ. ಕಡಿದ ಅಂಗವನ್ನು ಅಲ್ಲಾಡಿಸದಂತೆ ಕೋಲು ಅಥವಾ ಬಟ್ಟೆಯಿಂದ ಕಟ್ಟಿ. ಚಲನೆಯಿಂದ ವಿಷ ಬೇಗ ದೇಹಕ್ಕೆ ಹರಡುತ್ತದೆ.

ಉಂಗುರ, ಬಳೆ, ಕೈಗಡಿಯಾರ, ಬಿಗಿಯಾದ ಬಟ್ಟೆಗಳನ್ನು ತೆಗೆದುಹಾಕಿ, ಏಕೆಂದರೆ ತೀವ್ರವಾದ ಊತ ಬರುತ್ತದೆ. ಗಾಯವನ್ನು ಸಾಬೂನು ಮತ್ತು ನೀರಿನಿಂದ ನಿಧಾನವಾಗಿ ತೊಳೆದು, ಸ್ವಚ್ಛವಾದ ಬಟ್ಟೆಯಿಂದ ಸಡಿಲವಾಗಿ ಮುಚ್ಚಿ. ಸಾದ್ಯವಿದ್ದರೆ ಹಾವಿನ ಫೋಟೋ ತೆಗೆದುಕೊಳ್ಳಿ ಅಥವಾ ಅದರ ಬಣ್ಣ, ಗಾತ್ರವನ್ನು ನೆನಪಿಟ್ಟುಕೊಳ್ಳಿ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಹಾವು ಕಡಿತದ ನಂತರ ಇವನ್ನು ಮಾಡಲೇಬೇಡಿ

ಗಾಯವನ್ನು ಬ್ಲೇಡ್‌ನಿಂದ ಕೊಯ್ಯಬೇಡಿ ಅಥವಾ ಬಾಯಿಂದ ವಿಷವನ್ನು ಹೀರಲು ಪ್ರಯತ್ನಿಸಬೇಡಿ. ಇದರಿಂದ ಸೋಂಕು ಉಂಟಾಗಿ ವಿಷ ಬೇಗ ಹರಡುತ್ತದೆ. ಹಗ್ಗ ಅಥವಾ ಬಟ್ಟೆಯಿಂದ ಬಿಗಿಯಾಗಿ ಕಟ್ಟಬೇಡಿ. ಟೂರ್ನಿಕೆಟ್ ಕಟ್ಟುವುದರಿಂದ ರಕ್ತ ಸಂಚಾರ ನಿಂತು ಅಂಗವೇ ಊನವಾಗಬಹುದು. ಗಾಯಕ್ಕೆ ಐಸ್ ಅಥವಾ ತಣ್ಣೀರಿನ ಪಟ್ಟಿ ಇಡಬೇಡಿ. ಇದರಿಂದ ಫ್ರಾಸ್ಟ್‌ಬೈಟ್ ಆಗುತ್ತದೆ. ಮದ್ಯಪಾನ ಮಾಡಬೇಡಿ ಮತ್ತು ಆಸ್ಪಿರಿನ್‌ನಂತಹ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಇವು ರಕ್ತವನ್ನು ತೆಳ್ಳಗೆ ಮಾಡಿ ಲಕ್ಷಣಗಳನ್ನು ಮರೆಮಾಡುತ್ತವೆ.

ಸಮಾಜದಲ್ಲಿರುವ ಮೂಢನಂಬಿಕೆಗಳು

ಅನೇಕ ಸಮುದಾಯಗಳಲ್ಲಿ ಹಾವು ಕಡಿತವನ್ನು ಮಾಟ, ಮಂತ್ರ ಅಥವಾ ದೈವದ ಶಾಪ ಎಂದು ನಂಬಲಾಗುತ್ತದೆ. ಇದರಿಂದ ಜನರು ಆಸ್ಪತ್ರೆಗೆ ಹೋಗದೆ ಮಾಂತ್ರಿಕರ ಬಳಿ ಹೋಗುತ್ತಾರೆ. ಹಾವಿಗೆ ಹಾನಿ ಮಾಡಿದರೆ ಅದರ ಜೊತೆಗಾರ ಸೇಡು ತೀರಿಸಿಕೊಳ್ಳಲು ಬರುತ್ತದೆ ಎಂಬುದು ಶುದ್ಧ ಸುಳ್ಳು. ನಾಗಮಾಣಿಕ್ಯ, ಕಲ್ಲುಗಳು, ಗಿಡಮೂಲಿಕೆ ಕಷಾಯಗಳು ಅಥವಾ ವಿಷಾಹಾರಿಗಳಿಂದ ವಿಷ ತೆಗೆಯಲು ಸಾಧ್ಯವಿಲ್ಲ. ಹಾವು ಕಡಿತಕ್ಕೆ ಆಂಟಿವೆನಮ್ ಒಂದೇ ವೈಜ್ಞಾನಿಕ ಚಿಕಿತ್ಸೆ.

ಮಳೆಗಾಲದಲ್ಲಿ ರಾತ್ರಿ ಹೊರಗೆ ಹೋಗುವಾಗ ಟಾರ್ಚ್ ಬಳಸಿ, ಶೂ ಧರಿಸಿ. ಮನೆಯ ಸುತ್ತಲೂ ಕಸ ಕಡ್ಡಿ ಇಲ್ಲದಂತೆ ನೋಡಿಕೊಳ್ಳಿ. ಹಾವುಗಳು ನಿಮ್ಮನ್ನು ಕಚ್ಚಲು ಬಯಸುವುದಿಲ್ಲ, ಅವುಗಳಿಗೂ ಬದುಕು ಬೇಕು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!