ಭದ್ರಾವತಿಯ ವ್ಯಕ್ತಿಗೆ ₹25,000 ದಂಡ, ತಪ್ಪಿದಲ್ಲಿ 3 ತಿಂಗಳು ಜೈಲು ಶಿಕ್ಷೆ, ಏನಿದು ಕೇಸ್‌?

ಭದ್ರಾವತಿ: ಕೆ.ಇ.ಬಿ ಇಲಾಖೆಗೆ ಸೇರಿದ ಬ್ಯಾಟರಿ ಹಾಗೂ ಕಾಪರ್ ವೈರ್ ಕಳವು ಮಾಡಿದ್ದ ಆರೋಪಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ₹25,000 ದಂಡ ವಿಧಿಸಿ ತೀರ್ಪು ನೀಡಿದೆ.

ಬೊಮ್ಮನಕಟ್ಟೆ ವೃಕ್ಷೋದ್ಯಮದ ರಸ್ತೆಯ ಬದಿಯಲ್ಲಿ ಕೆ.ಇ.ಬಿ ಇಲಾಖೆಯಿಂದ ಅಳವಡಿಸಲಾಗಿದ್ದ 2 ಬ್ಯಾಟರಿ ಹಾಗೂ ಕಾಪರ್ ವೈರ್‌ಗಳು ಕಳ್ಳತನವಾಗಿದ್ದವು. ಈ ಸಂಬಂಧ ಮಂಜುನಾಥ್ (40) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಇನ್ಸ್‌ಪೆಕ್ಟರ್ ಯೋಗೇಶ್ ಕೆ.ಎಂ. ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

Bhadravathi-City-Board

ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಮುನಿರಾಜು ಅವರು, ಆರೋಪಿ ಮಂಜುನಾಥ್‌ಗೆ ₹25,000 ದಂಡ ವಿಧಿಸಿದ್ದಾರೆ. ದಂಡದ ಮೊತ್ತ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ವಾದ ಮಂಡಿಸಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.