ಪಾನ್‌ ಮಸಾಲಾ ವಿಚಾರವಾಗಿ ಗಲಾಟೆ, ಇಬ್ಬರ ಮೇಲೆ ಹಲ್ಲೆ

ಹೊಳೆಹೊನ್ನೂರು: ಪಾನ್ ಮಸಾಲ ಪ್ಯಾಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಯುವಕ ಮತ್ತು ಆತನ ಸ್ನೇಹಿತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿದ್ದಾರೆ.

ಹೊಳೆಹೊನ್ನೂರು ಗ್ರಾಮದ ಸಿ.ಎನ್. ರಸ್ತೆ ಮಸೀದಿ ಹತ್ತಿರ ಘಟನೆ ನಡೆದಿದೆ. ಸ್ಥಳೀಯರಾದ ಜಾಫರ್ ಸಹೋದರನ ಒಂದೂವರೆ ವರ್ಷದ ಮಗನನ್ನು ಕರೆದುಕೊಂಡು ಅಂಗಡಿಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬಾತ ಒಂದು ಪಾನ್‌ ಮಾಸಲ ಕೊಡು ಎಂದು ಜಾಫರ್‌ ಕೇಳಿದ್ದಾನೆ. ಅದಕ್ಕೆ ಜಾಫರ್ ತನ್ನ ಬಳಿ ಇಲ್ಲ ಎಂದು ಹೇಳಿದ್ದಾರೆ.

Holehonnuru-Police-Station-Bhadravathi-jpg

ಆಕ್ರೋಶಗೊಂಡ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ ಜಾಫರ್ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ. ಜಾಫರ್ ಕೈಯಲ್ಲಿದ್ದ ಮಗುವನ್ನು ಕೆಳಗೆ ಕೂರಿಸಿದ್ದಾರೆ. ಇದೇ ವೇಳೆ ಗಲಾಟೆ ಬಿಡಿಸಲು ಬಂದ ಜಾಫರ್ ಗೆಳೆಯ ಶಾರುಖ್ ಖಾನ್ ಮೇಲೆ ಆ ವ್ಯಕ್ತಿ ಮತ್ತು ಆತನ ಜೊತೆಗೆ ಬಂದಿದ್ದ ಮತ್ತೊಬ್ಬ ದಾಳಿ ನಡೆಸಿದ್ದಾರೆ. ಶಾರುಖ್ ಖಾನ್ ಅವರನ್ನು ತಳ್ಳಿ, ಮುಖ ಮತ್ತು ಎದೆಗೆ ಕಲ್ಲಿನಿಂದ ಗುದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಳು ಶಾರುಖ್ ಖಾನ್ ಅವರನ್ನು ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.