ಭದ್ರಾವತಿ: ಅನ್ವರ್ ಕಾಲೋನಿಯಲ್ಲಿ ವಿಶ್ವ ಅಲಿಯಾಸ್ ಮುದ್ದೆ ಮೇಲಿನ ಮಾರಕ ದಾಳಿ ವಿರುದ್ಧ ಭದ್ರಾವತಿ ಶಾಸಕ ಸಂಗಮೇಶ್ವರ ಪುತ್ರ ಬಿ.ಎಸ್.ಬಸವೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾಕ್ಸ್ ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಸವೇಶ್, ಇಡೀ ಊರಿಗೆ ಗೊತ್ತಿರುವಂತೆ, ವಿಶ್ವ ಕಾಂಗ್ರೆಸ್ ಪಕ್ಷದ ಟಾಪ್ 10 ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬ. ಆತ ಪಕ್ಷದಲ್ಲಿ ಅತಿ ಹೆಚ್ಚು ಸಕ್ರಿಯನಾಗಿರುವುದೇ ಈ ದಾಳಿಗೆ ಕಾರಣ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಆರೋಪಿಸಿದರು.

ಜೆಡಿಎಸ್ನವರು ಈ ಹಿಂದೆಯೂ ಆತನ ಮೇಲೆ ದಾಳಿಗೆ ಯತ್ನಿಸಿದ್ದರು. ಇದೀಗ ಆತ ಒಬ್ಬನೇ ಇರುವುದನ್ನು ಹೊಂಚು ಹಾಕಿ, ಹೊರ ಊರುಗಳಿಂದ ಸುಪಾರಿ ಗೂಂಡಾಗಳನ್ನು ಕರೆಯಿಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ವಿಶ್ವನ ಎರಡು ಕೈಗಳು ಮತ್ತು ಒಂದು ಕಾಲು ಕತ್ತರಿಸಿದ್ದಾರೆ. ತಲೆಗೆ ಪೆಟ್ಟು ಬಿದ್ದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ 48 ಗಂಟೆಗಳ ಕಾಲಾವಧಿ ಅತ್ಯಂತ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಗಾಯಾಳುವಿನ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದ ಬಸವೇಶ್, ಗೂಂಡಾಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಸಿಐಡಿ ತನಿಖೆಗೆ ಒತ್ತಾಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.