ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019
ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ.
ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ ಭದ್ರಾವತಿಯ ವಿನಯ್ ಇದನ್ನು ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ್ದಾನೆ.
ಭದ್ರಾವತಿಯ ವಿನಯ್ ಮಾಡಿದ್ದೇನು?
ಭದ್ರಾವತಿಯ ರಂಗಪ್ಪ ಸರ್ಕಲ್’ನಲ್ಲಿ, ವ್ಯಕ್ತಿಯೊಬ್ಬರು ಭಿಕ್ಷೆ ಬೇಡುತ್ತಿದ್ದರು. ಶಿವಮೊಗ್ಗದ JNNCE ಕ್ಯಾಂಪಸ್’ನಲ್ಲಿ ಬಿ.ಕಾಂ ಫೈನಲ್ ಇಯರ್ ಓದುತ್ತಿರುವ ವಿನಯ್ ಬಳಿ ಬಂದ ಭಿಕ್ಷುಕ, ಹಸಿವು ಅಂದಿದ್ದಾರೆ. ಹಾಗಾಗಿ, ಊಟ ಕೊಡಿಸಿದ ವಿನಯ್, ಅವರ ಪೂರ್ವಪರ ವಿಚಾರಸಿದ್ದಾರೆ. ಆಗಲೇ ಬೆಚ್ಚಿಬೀಳುವ ಸಂಗತಿ ಹೊರಬಿದ್ದಿದ್ದು. ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಹೆಸರು, ಊರು, ಕುಟುಂಬದ ಮಾಹಿತಿ ಲಭ್ಯವಾಗಿದೆ. ಆಗಲೇ ವಿನಯ್, ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ಅವರ ಕುಟುಂಬದೊಂದಿಗೆ ಸೇರಿಸಬೆಕು ಅನ್ನುವ ನಿರ್ಧಾರ ತೆಗುದುಕೊಂಡಿದ್ದು.
ಆ ಘಟನೆ ಬಳಿಕ, ಸತತ ಮೂರು ದಿನ ಭಿಕ್ಷೆ ಬೇಡುತ್ತಿದ್ದ ವರದರಾಜು ಅವರನ್ನು, ವಿನಯ್ ಹುಡುಕಿದ್ದಾರೆ. ಕೊನೆಗೂ ಅವರ ಹುಡುಕಾಟಕ್ಕೆ ಫಲ ಸಿಕ್ಕಿತು. ‘ಕೈಗೆ ಸಿಕ್ಕ ವರದರಾಜು ಅವರನ್ನು ಕರೆದೊಯ್ದು, ಕಟಿಂಗ್, ಶೇವಿಂಗ್ ಮಾಡಿಸಿದೆ. ಭದ್ರಾ ಹೊಳೆ ಬಳಿ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿಸಿ, ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸಿದೆ. ಆಮೇಲೆ ಪೊಲೀಸ್ ಠಾಣೆಗೆ ಕರೆದೊಯ್ದೆ’ ಅಂತಾರೆ ವಿನಯ್.
ಸ್ಟೇಷನ್’ನಲ್ಲಿ ಪೊಲೀಸರಿಂದ ವಿಚಾರಣೆ..!
ವಿನಯ್ ನಿರ್ಧಾರಕ್ಕೆ ಕೇಳಿ, ಭದ್ರಾವತಿ ಪೊಲೀಸರು ನೆರವಿಗೆ ನಿಂತರು. ಭಿಕ್ಷೆ ಬೇಡುತ್ತಿದ್ದ ವರದರಾಜು ಅವರನ್ನು ಸ್ಟೇಷನ್’ಗೆ ಕರೆದೊಯ್ದು, ಮಾಹಿತಿ ಕಲೆಹಾಕಿದ್ದಾರೆ. ‘ವರದರಾಜು ಅರ್ದೊಟ್ಲು ಗ್ರಾಮದವರು. ಅವರಿಗೆ ಹೆಂಡತಿ, ಮಕ್ಕಳು, ಆಳಿಯಂದಿರೆಲ್ಲ ಇದ್ದಾರೆ ಅನ್ನುವುದು ಗೊತ್ತಾಯಿತು’ ಎಂದು ವಿನಯ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು. ನಂತರ ವಿನಯ್ ಮತ್ತು ಪೊಲೀಸರು, ವರದರಾಜು ಅವರನ್ನು ಊರಿಗೆ ಕಳುಹಿಸಲು ಸಫಲರಾಗಿದ್ದಾರೆ.
ಬೆಳಗ್ಗೆ ಕಾಲೇಜು, ರಾತ್ರಿ ಉದ್ಯೋಗ, ಉಳಿದದ್ದು ಸಮಾಜಕ್ಕೆ
ಕಾಲೇಜು ಟೈಮ್ ಮುಗಿದ ಬಳಿಕ, ವಿನಯ್, ಪಾರ್ಟ್ ಟೈಂ ಕೆಲಸ ಮಾಡುತ್ತಾರೆ. ಭದ್ರಾವತಿ ಬಸ್ ಸ್ಟಾಂಡ್’ನಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ದಿನಕ್ಕೆ ನೂರರಿಂದ ನೂರೈವತ್ತು ರೂಪಾಯಿ ಸಂಪಾದಿಸುತ್ತಾರೆ. ಇದೇ ಹಣದಲ್ಲೇ, ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇನ್ನು, ವಿನಯ್ ಮಾಡಿದ ಈ ಕೆಲಸದ ವಿಡಿಯೋ, ವೈರಲ್ ಆಗಿದೆ. ವಾಟ್ಸಪ್, ಫೇಸ್’ಬುಕ್’ನಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಈವರೆಗೂ ಒಬ್ಬಂಟಿಯಾಗಿ ಮಾಡುತ್ತಿದ್ದ ಕೆಲಸಕ್ಕೆ, ಹತ್ತಾರು ಕೈಗಳು ಜೊತೆಗೂಡಿವೆ. ಸ್ನೇಹಿತರು, ಸಂಘಟನೆಗಳು ವಿನಯ್ ಕೆಲಸಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]