ಭದ್ರಾವತಿ: ಕಾಡುಹಂದಿ ಅಡ್ಡಬಂದ ಕಾರಣ ಗಾಬರಿಗೊಂಡು ಚಲಿಸುತ್ತಿದ್ದ ಕಾರಿನ ಬಾಗಿಲು ತೆಗೆದು ಕೆಳಗೆ ಬಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಹೊಸಹಳ್ಳಿ ಗ್ರಾಮದ ನಾರದಮುನಿ ಎಂಬುವವರಿಗೆ ಅನಾರೋಗ್ಯ ಇದ್ದ ಕಾರಣ ಅವರ ಮೈದುನ ಕುಬೇರಪ್ಪ ಎಂಬುವವರು ತಮ್ಮ ಹ್ಯುಂಡೈ ಕಾರಿನಲ್ಲಿ ಚಿಕಿತ್ಸೆಗಾಗಿ ಭದ್ರಾವತಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಕಲ್ಪನಹಳ್ಳಿ ಮತ್ತು ಹಳೆ ಕೂಡ್ಲಿಗೆರೆ ಗ್ರಾಮಗಳ ನಡುವೆ ಕಾರು ಚಲಿಸುತ್ತಿದ್ದಾಗ ಏಕಾಏಕಿ ಕಾಡುಹಂದಿ ಅಡ್ಡಬಂದಿದೆ ಎಂದು ಆರೋಪಿಸಲಾಗಿದೆ.

ಈ ವೇಳೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ನಾರದಮುನಿ ಅವರು ಗಾಬರಿಯಾಗಿ ಎಡಭಾಗದ ಬಾಗಿಲು ತೆಗೆದಿದ್ದಾರೆ. ನಿಯಂತ್ರಣ ತಪ್ಪಿ ಕಾರಿನಿಂದ ಕೆಳಗೆ ಬಿದ್ದಿದ್ದರಿಂದ ಅವರ ತಲೆಯ ಹಿಂಭಾಗ ಹಾಗೂ ಎಡಕಿವಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಅಲ್ಲಿಂದ ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.