ಭದ್ರಾವತಿ: ರಸ್ತೆಯಲ್ಲಿ ಜೋರಾಗಿ ಕೂಗಾಡದಂತೆ ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಸೇರಿದ ಹೊಸ ಮನೆಯ ಮುಂಭಾಗದ ಬಾಗಿಲಿಗೆ ಬೆಂಕಿ ಹಚ್ಚಿ ಹಾನಿ ಮಾಡಿರುವ ಘಟನೆ ಭದ್ರಾವತಿ ನಗರದ ಶಿವರಾಮ ನಗರದಲ್ಲಿ ನಡೆದಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಉಮೇಶ್ ಎಂಬುವವರು ಹೊಸದಾಗಿ ಮನೆ ನಿರ್ಮಿಸಿದ್ದು, ಜುಲೈ 2ರಂದು ಗೃಹಪ್ರವೇಶ ನಿಗದಿಪಡಿಸಿದ್ದರು. ಜೂನ್ 14ರ ಭಾನುವಾರ ಸಂಜೆ ಹೊಸ ಮನೆಯ ಕೆಲಸ ಮುಗಿಸಿ ದೀಪಗಳನ್ನು ಆನ್ ಮಾಡಿ ಬೀಗ ಹಾಕಿಕೊಂಡು ಅವರು ತಮ್ಮ ಬಾಡಿಗೆ ಮನೆಗೆ ತೆರಳಿದ್ದರು.

ಮರುದಿನ ಬೆಳಗ್ಗೆ ಬಂದು ನೋಡಿದಾಗ ದುಷ್ಕರ್ಮಿಗಳು ಮುಂಭಾಗದ ಬಾಗಿಲಿಗೆ ಬೆಂಕಿ ಹಾಕಿರುವುದು ಕಂಡುಬಂದಿದೆ. ಇದರಿಂದ ಬಾಗಿಲಿನ ಹೊಸ್ತಿಲು ಸುಟ್ಟು ಹೋಗಿದ್ದು, ಸುಮಾರು ₹50,000 ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಈಚೆಗೆ ಸಂಜೆ ಉಮೇಶ್ ಮತ್ತು ಅವರ ಪತ್ನಿ ಹೊಸ ಮನೆಯ ಬಳಿ ಹೋಗಿ ವಾಪಸ್ ಬರುತ್ತಿದ್ದಾಗ, ಸಮೀಪದ ಖಾಲಿ ಜಾಗದಲ್ಲಿ ಕುಳಿತಿದ್ದ ಹುಡುಗರ ಬಳಿ ಸ್ಥಳೀಯ ವ್ಯಕ್ತಿಯೊಬ್ಬ, ನನಗೆ ರಸ್ತೆಯಲ್ಲಿ ಕೂಗಾಡದಂತೆ ಬುದ್ಧಿ ಹೇಳಿದ್ದಕ್ಕೆ ನಾನೇ ಇವರ ಮನೆಯ ಬಾಗಿಲಿಗೆ ಬೆಂಕಿ ಹಾಕಿದೆ ಎಂದು ಜೋರಾಗಿ ಹೇಳಿಕೊಳ್ಳುತ್ತಿರುವುದು ಕೇಳಿಸಿದೆ. ಈ ಹಿನ್ನೆಲೆ ಉಮೇಶ್ ಅವರು ದೂರು ನೀಡಿದ್ದು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
