ಹೊಳೆಹೊನ್ನೂರು: ಹೋಟೆಲ್‌ಗಳು ಹಾಗೂ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಹಳೆಯ ಚಿಕನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಅಧಿಕಾರಿಗಳು ಪೇಟೆ ಬೀದಿ, ಭದ್ರಾವತಿ ರಸ್ತೆ ಹಾಗೂ ಚನ್ನಗಿರಿ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದರು. ಹೋಟೆಲ್‌ಗಳಲ್ಲಿ ಇಡ್ಲಿ ಪಾತ್ರೆಗಳಿಗೆ ಬಟ್ಟೆ ಬದಲಿಗೆ ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದುದ್ದನ್ನು ಕಂಡು ಅಧಿಕಾರಿಗಳು ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಆಹಾರ ಪಾರ್ಸಲ್‌ಗೆ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದರು.

ಚನ್ನಗಿರಿ ರಸ್ತೆಯ ಪೆಟ್ರೋಲ್ ಬಂಕ್ ಎದುರಿನ ಅಂಗಡಿಯೊಂದರಲ್ಲಿ ಅವಧಿ ಮೀರಿದ ಚಿಪ್ಸ್, ಜ್ಯೂಸ್ ಬಾಟಲಿ, ಪಾಮ್ ಆಯಿಲ್ ಹಾಗೂ ಹೋಟೆಲ್ ಒಂದರ ಫ್ರಿಡ್ಜ್‌ನಲ್ಲಿಟ್ಟಿದ್ದ ಹಳೆಯ ಚಿಕನ್ ಜಪ್ತಿ ಮಾಡಿದರು. ಪರವಾನಗಿ ನವೀಕರಿಸದ ಅಂಗಡಿಗಳಿಗೆ ಸ್ಥಳದಲ್ಲೇ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿದರು.
ಚಿಕನ್ ಸ್ಟಾಲ್‌ಗಳಿಗೆ ಭೇಟಿ ನೀಡಿ ತಾಜಾ ಮಾಂಸ ಮಾತ್ರ ಮಾರಾಟ ಮಾಡಲು ಸೂಚನೆ ನೀಡಿದರು. ರಸ್ತೆಯಲ್ಲಿದ್ದ ಕೋಳಿ ಟ್ರೇಗಳನ್ನು ತೆರವುಗೊಳಿಸಿ, ಚರಂಡಿಗೆ ತ್ಯಾಜ್ಯ ಸುರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದೇ ವೇಳೆ ಮೊದಲು ಪ್ಲಾಸ್ಟಿಕ್ ಬ್ಯಾನ್ ಮಾಡಿ, ಚರಂಡಿ ಸ್ವಚ್ಛಗೊಳಿಸಿ ಶುದ್ಧ ನೀರು ಕೊಡಿ ಎಂದು ಸ್ಥಳೀಯರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಆಕ್ರೋಶ ಹೊರಹಾಕಿದರು.
ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉನ್ನಿಕುಮಾರ್, ಅಧಿಕಾರಿಗಳಾದ ಅಣ್ಣಪ್ಪಸ್ವಾಮಿ, ಪ್ರದೀಪ್, ದೇವೇಂದ್ರಾ ನಾಯ್ಕ್, ಹಾಲೇಶ್, ಸುಮಿತ್ರಾ, ತನುಜಾ, ದಿವ್ಯರಾಣಿ ಹಾಗೂ ಕರಿಯಪ್ಪ ಉಪಸ್ಥಿತರಿದ್ದರು.