ಭದ್ರಾವತಿ: ರಾಜ್ಯದಲ್ಲಿ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ರಜಪೂತ್ ಸಮುದಾಯದ ಅಭಿವೃದ್ಧಿಗಾಗಿ ರಜಪೂತ್ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಭದ್ರಾವತಿ ತಾಲ್ಲೂಕಿನ ರಜಪೂತ್ ಸಮಾಜದ ಪ್ರಮುಖರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಸುಮಾರು 18 ಲಕ್ಷ ರಜಪೂತ್ ಜನಾಂಗದವರಿದ್ದಾರೆ. ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಆದರೆ ಜನಾಂಗದಲ್ಲಿ ಶೇ.10 ರಷ್ಟು ಜನರು ಮಾತ್ರ ಶಿಕ್ಷಣ ಪಡೆದಿದ್ದಾರೆ. ಶೇ.8 ರಷ್ಟು ಜಮೀನು ಮಾತ್ರ ಈ ಸಮುದಾಯದವರ ಬಳಿಯಿದೆ. ರಾಜಕೀಯ ಕ್ಷೇತ್ರದಲ್ಲೂ ಈ ಜನಾಂಗಕ್ಕೆ ಅತ್ಯಂತ ಕಡಿಮೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ರಾಜ್ಯದಲ್ಲಿ ಒಟ್ಟು 128 ನಿಗಮ ಮಂಡಳಿಗಳು ಅಸ್ತಿತ್ವದಲ್ಲಿವೆ. ಆದರೆ ರಜಪೂತ್ ಜನಾಂಗಕ್ಕೆ ಇದುವರೆಗೆ ಯಾವುದೇ ನಿಗಮ ಮಂಡಳಿ ಸಿಕ್ಕಿಲ್ಲ. ಇದರಿಂದ ಸಮುದಾಯದವರು ಆರ್ಥಿಕ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಭದ್ರಾವತಿ ತಾಲ್ಲೂಕು ರಜಪೂತ್ ಸಮುದಾಯದ ಪ್ರಮುಖರಾದ ಸಂದೀಪ್ ಸಿಂಗ್.ಎಸ್.ಆರ್, ಗೋಪಾಲ್ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.
