ಹೊಳೆಹೊನ್ನೂರು: ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೈದೊಳಲು – ಮಲ್ಲಾಪುರ ರಸ್ತೆಯ ಸರ್ಕಾರಿ ಆಸ್ಪತ್ರೆ ಎದುರು ಘಟನೆ ನಡೆದಿದೆ.
ಭದ್ರಾವತಿ ತಾಲ್ಲೂಕಿನ ಗೂಡುಮಘಟ್ಟ ಗ್ರಾಮದ ನಿವಾಸಿ ರಂಗಪ್ಪ (38) ಗಾಯಗೊಂಡವರು. ರಂಗಪ್ಪ ಅವರು ಸ್ನೇಹಿತ ಜಗದೀಶ್ ಅವರೊಂದಿಗೆ ಸರ್ಕಾರಿ ಆಸ್ಪತ್ರೆ ಎದುರು ಬೈಕ್ ನಿಲ್ಲಿಸಿ ಗಣೇಶೋತ್ಸವ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಈ ವೇಳೆ ಆಗರದಹಳ್ಳಿ ಕಡೆಯಿಂದ ಬಂದ ಟ್ರ್ಯಾಕ್ಟರ್ ರಸ್ತೆ ಬದಿಯಲ್ಲಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ರಂಗಪ್ಪ ಮತ್ತು ಜಗದೀಶ್ ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ರಂಗಪ್ಪ ಅವರ ಸೊಂಟ, ಬಲಗಾಲು ಹಾಗೂ ಮೈಕೈಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಕುಳಿತಿದ್ದ ಜಗದೀಶ್ ಅವರಿಗೂ ಗಾಯವಾಗಿದೆ. ಅಪಘಾತದಲ್ಲಿ ಬೈಕ್‌ನ ಮುಂಭಾಗ ಜಖಂಗೊಂಡಿದೆ. ಕೂಡಲೆ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.