ಅಮ್ಮನಘಟ್ಟ ಜಾತ್ರೆ, ದೇವಸ್ಥಾನದ ಅಭಿವೃದ್ಧಿಗೆ ನೀಲನಕ್ಷೆ, ಏನೇನೆಲ್ಲ ಯೋಜನೆ ಇದೆ?

ರಿಪ್ಪನ್‌ಪೇಟೆ: ಸಮೀಪದ ಅಮ್ಮನಘಟ್ಟದ ಪ್ರಸಿದ್ಧ ಜೇನುಕಲ್ಲಮ್ಮ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ₹28 ಕೋಟಿ ಅಂದಾಜು ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜೇನುಕಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ತಮ್ಮ ಶಾಸಕರ ಅನುದಾನದಡಿ ನಿರ್ಮಿಸಲಾದ ನವೀಕೃತ ಪುಷ್ಕರಣಿ ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

MLA-Beluru-Gopalakrishna-visit-Ammanagatta-Temple-near-ripponpete

ತಮ್ಮ ಅನುದಾನದಿಂದ ನೀಡಲಾಗಿರುವ ₹1 ಕೋಟಿ ಮೊತ್ತದಲ್ಲಿ ಪ್ರವಾಸಿ ಮಂದಿರ, ತಾಯಿ-ಮಗುವಿನ ವಿಶ್ರಾಂತಿ ಧಾಮ ಹಾಗೂ ಅಡುಗೆ ಕೋಣೆ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲಗೋಡು ರತ್ನಾಕರ ಅವರ ಆಡಳಿತದಿಂದಾಗಿ ದೇವಸ್ಥಾನದ 24 ಎಕರೆ ಭೂಪ್ರದೇಶದ ಗಡಿ ಗುರುತಿಸುವ ಸರ್ವೇ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರು.

₹28 ಕೋಟಿಯ ಯೋಜನೆಗಳು

ಅಮ್ಮನಘಟ್ಟ ಹಾಗೂ ಹಳೆ ಅಮ್ಮನಘಟ್ಟ ನಡುವೆ ತೂಗು ಸೇತುವೆ ನಿರ್ಮಾಣ, ದಾಸೋಹ ಕೇಂದ್ರ, ರಸ್ತೆ ಅಭಿವೃದ್ಧಿ, ಔಷಧಿ ವನ ಸಂರಕ್ಷಣೆ ಹಾಗೂ ಶಿಲಾಮಯ ಕಟ್ಟಡಕ್ಕೆ ಗಾಜಿನ ಮನೆ ನಿರ್ಮಾಣ ಸೇರಿದಂತೆ ಒಟ್ಟು ₹28 ಕೋಟಿ ವೆಚ್ಚದ ಯೋಜನೆಗಳನ್ನು ನಡೆಸಲಾಗುತ್ತದೆ. ಈ ಸಂಬಂಧ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಚರ್ಚಿಸಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವುದಾಗಿ ಅವರು ಭರವಸೆ ನೀಡಿದರು.

30 ಸಾವಿರಕ್ಕೂ ಹೆಚ್ಚು ಭಕ್ತರು

ಜಾತ್ರೆ ಅಂಗವಾಗಿ ಬೆಳಿಗ್ಗೆ 5 ಗಂಟೆಯಿಂದಲೇ ದೇವಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನ ನೆರವೇರಿದವು. 30 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕಲಗೋಡು ರತ್ನಾಕರ, ಮುಜರಾಯಿ ಇಲಾಖೆಯ ಅಧಿಕಾರಿಗಳು, ವ್ಯವಸ್ಥಾಪನ ಸಮಿತಿ ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.