ಬಜರಂಗದಳ ಕಾರ್ಯಕರ್ತರ ಮೇಲೆ ದಾಳಿ, ಗೋವು ಕಳ್ಳರ ವಿರುದ್ಧ ಆಕ್ರೋಶ, ಆಗಿದ್ದೇನು?

ಶಿವಮೊಗ್ಗ ಲೈವ್.ಕಾಂ | ಹೊಸನಗರ

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಗೋವುಗಳ ಕಳವು ಹಾಗೂ ಅಕ್ರಮ ಸಾಗಣೆ ತಡೆಯಲು ಮುಂದಾದ ಬಜರಂಗದಳ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಕಾರ್ಯಕರ್ತರು ಗಾಯಗೊಂಡಿದ್ದಾರೆ.

Cow-thieves-attack-car-in-Hosanagara

ಹರತಾಳು ಗ್ರಾಮದಲ್ಲಿ ಬಜರಂಗದಳ ಕಾರ್ಯಕರ್ತರೊಬ್ಬರ ಕೊಟ್ಟಿಗೆಗೆ ನುಗ್ಗಿದ ಗುಂಪೊಂದು, ಗೋವು ಕದ್ದು ವಾಹನಕ್ಕೆ ತುಂಬಿಕೊಂಡು ಪರಾರಿಯಾಗುತ್ತಿತ್ತು. ಇದನ್ನು ಗಮನಿಸಿದ ಕಾರ್ಯಕರ್ತರು ತಕ್ಷಣವೇ ತಮ್ಮ ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದಾರೆ. ಸಾಗರ-ಶಿಕಾರಿಪುರ ರಸ್ತೆಯಲ್ಲಿ ನಡೆದ ಈ ಚೇಸ್ ವೇಳೆ, ಗೋ ಕಳ್ಳರು ತಮ್ಮ ವಾಹನವನ್ನು ಕಾರ್ಯಕರ್ತರ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಲ್ಲಿ ಎರಡು ಕಾರುಗಳು ಜಖಂಗೊಂಡಿವೆ. ಕಾರಿನಿಂದ ಕೆಳಗಿಳಿದ ಕಾರ್ಯಕರ್ತರ ಮೇಲೆ ಗೋವು ಕಳ್ಳರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಈ ಘಟನೆಯಲ್ಲಿ ಚಂದನ್ ಅವರ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ದಾಳಿಯಲ್ಲಿ ಕಿರಣ್ ಹಾಗೂ ಅಭಿಲಾಷ್ ಎಂಬುವವರಿಗೂ ಗಾಯಗಳಾಗಿವೆ.

ಶಾಸಕರು ಭೇಟಿ, ಆಕ್ರೋಶ

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಚಂದನ್ ಆರೋಗ್ಯ ವಿಚಾರಿಸಿದರು. ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ಬಳಿಕ ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಕ್ರಮ ಗೋ ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದರ ಜೊತೆಗೆ, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ