ಹುಲಿಕಲ್‌ ಘಾಟಿಯಲ್ಲಿ ಅದುಲು – ಬದಲು ವ್ಯವಸ್ಥೆ ಜಾರಿಗೊಳಿಸಿದ ಜಿಲ್ಲಾಡಳಿತ

ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ (ಹುಲಿಕಲ್) ಘಾಟ್‌ನಲ್ಲಿ (Hulikal Ghat) ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಪ್ರಯಾಣಿಕರಿಗೆ ಅದಲು-ಬದಲು ವ್ಯವಸ್ಥೆ ಮೂಲಕ ಸಂಚರಿಸಲು ಜಿಲ್ಲಾಡಳಿತ ತಾತ್ಕಾಲಿಕ ಅನುಮತಿ ನೀಡಿದೆ. ಈ ಕುರಿತು ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಹೊಸ ಆದೇಶದನ್ವಯ, ಶಿವಮೊಗ್ಗ-ಹೊಸನಗರ ಮಾರ್ಗವಾಗಿ ಕುಂದಾಪುರಕ್ಕೆ ಚಲಿಸುವ ಬಸ್‌ಗಳು ಘಾಟ್‌ನ ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಲಿವೆ. ಅಲ್ಲಿ ಪ್ರಯಾಣಿಕರು ಬಸ್ಸಿನಿಂದ ಇಳಿದು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಮೂಲಕ ಗುಡ್ಡ ಕುಸಿತವಾದ ಜಾಗವನ್ನು ದಾಟಿ, ಕೆಳಭಾಗದಲ್ಲಿ ಸಿದ್ಧಪಡಿಸಲಾಗಿರುವ ಪರ್ಯಾಯ ನಿಲುಗಡೆ ತಾಣಕ್ಕೆ ತಲುಪಬೇಕಾಗುತ್ತದೆ. ಅಲ್ಲಿಂದ ಕುಂದಾಪುರ ಕಡೆಯಿಂದ ಬರುವ ಮತ್ತೊಂದು ಬಸ್ಸಿನ ಮೂಲಕ ಪ್ರಯಾಣ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.

Hulikal-Ghat-Road-closed

ಇದನ್ನೂ ಓದಿ : ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಾರಿಗೆ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸಲಿದೆ. ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸ್ಥಳದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಇರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Kalleshwara-Enterprises.webp
Hulikal-Ghat-Road-closed

ಮಳೆಗಾಲ ಆರಂಭವಾಗಲಿರುವುದರಿಂದ ಪ್ರಯಾಣಿಕರ ಸುರಕ್ಷತೆಗಾಗಿ ಮೆಟ್ಟಿಲುಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಭೂಕುಸಿತ ಸಂಭವಿಸಿದ ಅಪಾಯಕಾರಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ನಿಗದಿತ ಸಮಯ ಮತ್ತು ನಿರ್ದಿಷ್ಟ ಆಸನ ಸಾಮರ್ಥ್ಯವುಳ್ಳ 35 ಆಸನಗಳ ವಾಹನಗಳಿಗೆ ಮಾತ್ರ ಈ ಬದಲಾವಣೆ ವ್ಯವಸ್ಥೆ ಅಡಿಯಲ್ಲಿ ಸಂಚರಿಸಲು ಅನುಮತಿಸಲಾಗಿದೆ.

ಬಾಳೆಬರೆ ಘಾಟ್ ವ್ಯಾಪ್ತಿಯಲ್ಲಿ ರಕ್ಷಣಾತ್ಮಕ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ತಾತ್ಕಾಲಿಕ ವ್ಯವಸ್ಥೆಯು ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment