ಹೊಸನಗರ: ತಾಲೂಕಿನ ಹೊಸಕೊಪ್ಪ ಗ್ರಾಮದ ಪಟಗುಪ್ಪ ಸೇತುವೆ ಹತ್ತಿರದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಹಸುವಿನ ಕರುವನ್ನು ಕೊಂದು ಪರಾರಿಯಾಗಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಮಹಮದ್ ಸಲೀಂ ಬಾಳೂರ್ (34), ಸುಲೇಮಾನ್ ಕೊಲಾರಿ (26), ಹಾಗೂ ಆಡೂರು ಗ್ರಾಮದ ಮಕ್ಬುಲ್ ಅಹ್ಮದ್ ಬಡಿಗೇರ (22) ಮತ್ತು ಮಲ್ಲಿಕ್ ರಿಹಾನ್ ಸುರಳೇಶ್ವರ (25) ಬಂಧಿತ ಆರೋಪಿಗಳಾಗಿದ್ದಾರೆ.

ಜೂನ್ 19 ರಂದು ಶರಾವತಿ ಹಿನ್ನೀರು ಪ್ರದೇಶದಲ್ಲಿ ಹಸುವಿನ ಕರುವನ್ನು ಕೊಂದಿರುವುದನ್ನು ಗಮನಿಸಿ ಹೊಸನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗೋಪಾಲಕೃಷ್ಣ ಅವರು ದೂರು ನೀಡಿದ್ದರು. ಈ ದೂರಿನನ್ವಯ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸ್ ಸಿಬ್ಬಂದಿ
ತನಿಖೆ ನಡೆಸಿದ ಹೊಸನಗರ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಬಿ. ಗೌಡಪ್ಪಗೌಡ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಯಿತು . ಹೊಸನಗರ ಠಾಣೆಯ ಪಿಎಸ್‌ಐ ಶಂಕರಗೌಡ ಪಾಟೀಲ್, ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ, ನಗರ ಠಾಣೆಯ ಪಿಎಸ್‌ಐ ಶಿವಾನಂದ ವೈ.ಕೆ ಹಾಗೂ ಸಿಬ್ಬಂದಿ ಕಿರಣ್ ಕುಮಾರ್ ಡಿ.ವೈ, ಶಿವಕುಮಾರನಾಯ್ಕ, ಮಾಯಾವ್ಯ ಗೋಕಾಕಿ, ರವಿಚಂದ್ರ, ಸುನಿಲ್, ಗೋಪಾಲಕೃಷ್ಣ ಮತ್ತು ಶಿವಮೊಗ್ಗ ಎಎನ್‌ಸಿ ವಿಭಾಗದ ಗುರುರಾಜ ಹಾಗೂ ಇಂದ್ರೇಶ್ ಅವರು ಪಾಲ್ಗೊಂಡಿದ್ದರು. ಜುಲೈ 4ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
