ಹೊಸನಗರ: ಪಟ್ಟಣದಲ್ಲಿ ನಡೆದಿದ್ದ ಬೈಕ್ ಕಳ್ಳತನ ಹಾಗೂ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಮೂಲದ ವ್ಯಕ್ತಿಯನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬೈಕ್ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ ಬೋವಿ ಕಾಲೋನಿ ನಿವಾಸಿ ಮೂರ್ತಿ.ವಿ ಅಲಿಯಾಸ್ ಕತ್ತೆಮೂರ್ತಿ (28) ಬಂಧಿತ. ಹೊಸನಗರ – ನಗರ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಪ್ರಕಾಶ್ ಎಂಬುವವರ ಬೈಕ್ ಕಳ್ಳತನವಾಗಿತ್ತು. ಇದಲ್ಲದೆ, ನಗರ ರಸ್ತೆಯ ಪಕ್ಕದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲ ಬೀಗ ಒಡೆದು ಹುಂಡಿ ಹಣವನ್ನು ಲೂಟಿ ಮಾಡಲಾಗಿತ್ತು. ಈ ಕುರಿತು ಹೊಸನಗರ ಠಾಣೆಯಲ್ಲಿ ಪ್ರತ್ಯೇಕ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.

ಜೂನ್ 10ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ₹60,000 ಮೌಲ್ಯದ ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ₹1,100 ನಗದು ಹಣ ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಹೊಸನಗರ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡ್ರ, ಪಿಎಸ್‌ಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಎಎಸ್‌ಐ ಸತೀಶ್ ರಾಜ್, ಸಿಬ್ಬಂದಿ ಮಾಯಪ್ಪ ಗೋಕಾವಿ ಮತ್ತು ಸುನಿಲ್ ಆರೋಪಿಯನ್ನು ಬಂಧಿಸಿದ್ದಾರೆ.
