ಹೊಸನಗರ: ಮನೆ ಮುಂಭಾಗದ ಹೂವಿನ ಪಾಟ್ ಅಡಿಯಲ್ಲಿಟ್ಟಿದ್ದ ಕೀ ಬಳಸಿ ಮನೆಯೊಳಗೆ ನುಗ್ಗಿದ ಕಳ್ಳರು, ಬೀರು ಮೀಟಿ ₹11.04 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹5,000 ನಗದು ಕಳ್ಳತನ ಮಾಡಲಾಗಿದೆ. ಹೊಸನಗರ ತಾಲ್ಲೂಕಿನ ಹೆಬ್ಬೈಲು ಗ್ರಾಮದ ಶಾಂತಮ್ಮ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 61 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹೇಗಾಯ್ತು ಕಳ್ಳತನ?
ಶಾಂತಮ್ಮ ಅವರು ಮನೆಯ ಹಿಂಬಾಗಿಲಿಗೆ ಚಿಲಕ ಹಾಕಿ, ಮುಂದೆ ಬಾಗಿಲಿಗೆ ಬೀಗ ಹಾಕಿದ್ದರು. ಬೀಗದ ಕೀ ಅನ್ನು ಎಂದಿನಂತೆ ಮನೆಯ ಮುಂಭಾಗದ ಹೂವಿನ ಪಾಟ್ ಅಡಿಯಲ್ಲಿ ಇಟ್ಟು ಹೆಬ್ಬೈಲು ಸರ್ಕಲ್ ಬಳಿಯ ಕೌದಿ ತಯಾರಿಕಾ ಘಟಕಕ್ಕೆ ಕೆಲಸಕ್ಕೆ ತೆರಳಿದ್ದರು. ಅವರ ಪತಿ ಕೂಲಿ ಕೆಲಸಕ್ಕೆ ಹಾಗೂ ಮಗ ಮಂದಾರ್ತಿಗೆ ತೆರಳಿದ್ದರು.

ಮಧ್ಯಾಹ್ನ 2 ಗಂಟೆಗೆ ಶಾಂತಮ್ಮ ಊಟಕ್ಕೆಂದು ಮನೆಗೆ ಹಿಂತಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಹೂವಿನ ಪಾಟ್ ಅಡಿಯಲ್ಲಿದ್ದ ಕೀ ತೆಗೆದುಕೊಂಡು ಬಾಗಿಲು ತೆರೆದು ಒಳಗೆ ನುಗ್ಗಿರುವ ಕಳ್ಳರು ಬೀರುವನ್ನು ಮೀಟಿ ತೆಗೆದು ಆಭರಣಗಳ ಬಾಕ್ಸ್ ಹಾಗೂ ನಗದು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಏನೇನೆಲ್ಲ ಕಳ್ಳತನವಾಗಿದೆ?
24 ಗ್ರಾಂ ತೂಕದ 2 ಎಳೆಯ ಗುಂಡಿನ ಚಿನ್ನದ ಸರ, 16 ಗ್ರಾಂ ತೂಕದ ಹವಳದ ಸರ, 11 ಗ್ರಾಂನ ಚಿನ್ನದ ಚೈನ್, 22 ಗ್ರಾಂನ 2 ಬಳೆಗಳು, ಬೆಂಡೋಲೆ, 3 ಉಂಗುರ ಹಾಗೂ ಜಡೆಗೊಂಡೆ ಸೇರಿದಂತೆ ಒಟ್ಟು 92 ಗ್ರಾಂ ತೂಕದ ₹11.04 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹5,000 ನಗದು ಕಳವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.