ಹೊಸನಗರದಲ್ಲಿ ಮ್ಯಾರಥಾನ್‌, ಆರೋಗ್ಯ ತಪಾಸಣೆ ಶಿಬಿರ, ಯಾವಾಗ?

ರಿಪ್ಪನ್‌ಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯ 25ನೇ ವರ್ಷದ ಅಂಗವಾಗಿ ಸೇವಾ ಸಂಕಲ್ಪ ದಿನ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಅಕ್ಟೋಬರ್ 14ರಂದು ಬೆಳಿಗ್ಗೆ 9.30ಕ್ಕೆ ಹೊಸನಗರದಲ್ಲಿ ಮ್ಯಾರಥಾನ್ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನತೆಯನ್ನು ದುಶ್ಚಟಗಳಿಂದ ದೂರವಿರಿಸುವ ಉದ್ದೇಶದಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾಗುವ ಜಾಥಾ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದರು.

Former-Minister-Haratalu-Halappa-BJP

ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಹಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೊಸನಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಜಿಲ್ಲಾ ಪ್ರಭಾರಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎನ್.ಆರ್. ದೇವಾನಂದ, ಸ್ಥಳೀಯ ಸಂಚಾಲಕ ಅಭಿ ಕಿರಣ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.