ರಿಪ್ಪನ್ಪೇಟೆ: ಹುಲಿಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ವ್ಯಕ್ತಿ ಹಾಗೂ ಆತನೊಂದಿಗೆ ಪತ್ನಿ ಸಹಗಮನವಾದ ಚಿತ್ರಣವಿರುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ರಿಪ್ಪೇನ್ಪೇಟೆ ಸಮೀಪದ ನಂದಿಹೊಳೆ ಗ್ರಾಮದಲ್ಲಿ ವೀರಗಲ್ಲು ಸಿಕ್ಕಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಂಶೋಧಕರಾದ ಆದಿತ್ಯ ನಂಜವಳ್ಳಿ ಮತ್ತು ವಡಗೆರೆ ಸುದರ್ಶನ್ ಸಿಂಗ್ ಅವರು ಇದನ್ನು ಪತ್ತೆ ಹಚ್ಚಿದ್ದಾರೆ. ಇದು ಸುಮಾರು ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಿದೆ. ಇದರಲ್ಲಿ ವೀರ, ಆತನ ಪತ್ನಿ ಹಾಗೂ ಜೊತೆಗಾರನ ಚಿತ್ರಣವಿದೆ. ಸೂರ್ಯ, ಚಂದ್ರ, ಶಿವಲಿಂಗ, ಹಸು-ಕರು ಮತ್ತು ಬೇಟೆ ನಾಯಿಯ ಚಿತ್ರವನ್ನೂ ಕೆತ್ತಲಾಗಿದೆ.

ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ ಅವರ ಪ್ರಕಾರ ಇದು ವಿಜಯನಗರೋತ್ತರ ಕಾಲಘಟ್ಟಕ್ಕೆ ಸೇರಿದ್ದಾಗಿದೆ. ಈ ವೀರಗಲ್ಲನ್ನು ನಂದಿಹೊಳೆ ಗ್ರಾಮದ ನದಿ ದಡದಲ್ಲಿ ಯಾರೋ ತಂದು ಹಾಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ‘ಇದರ ಮೂಲ ಸ್ಥಳ, ನಿಖರ ಕಾಲಮಾನ ಮತ್ತು ಅದರ ಹಿಂದಿನ ಐತಿಹಾಸಿಕ ಘಟನೆಯ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ’ ಎಂದು ಸಂಶೋಧಕ ಆದಿತ್ಯ ನಂಜವಳ್ಳಿ ಅಭಿಪ್ರಾಯಪಟ್ಟಿದ್ದಾರೆ.