ರಿಪ್ಪನಪೇಟೆ: ಸಾಗರ ರಸ್ತೆಯ ವೀರ ಸಾವರ್ಕರ್ ವೃತ್ತದ ತಿರುವಿನಲ್ಲಿ ಜಾನುವಾರನ್ನು ಕಾರಿನ ಡಿಕ್ಕಿಗೆ ಹಾಕಿಕೊಂಡು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹಳೆಮಂಡ್ಲಿ ವೀರಭದ್ರೇಶ್ವರ ದೇವಸ್ಥಾನದ ಸಮೀಪದ ನಿವಾಸಿಗಳಾದ ಮೆಕಾನಿಕ್ ಅಮೀರ್ ಸುಹೈಲ್ ಅಲಿಯಾಸ್ ಅಯಾನ್ (26) ಮತ್ತು ನರ್ಸರಿ ಕೆಲಸ ಮಾಡುವ ಮುಹಮ್ಮದ್ ಇಸ್ರಾರುಲ್ ಖಾನ್ (21) ಬಂಧಿತರು.

ಬೆಳಗಿನ ಜಾವ ಕಳ್ಳತನ
ಜುಲೈ 3ರಂದು ಬೆಳಗಿನ ಜಾವ 3.15ರ ಸುಮಾರಿಗೆ ವೀರ ಸಾವರ್ಕರ್ ರಸ್ತೆಯ ತಿರುವಿನಲ್ಲಿದ್ದ ಜಾನುವಾರನ್ನು ಕಳ್ಳರು ಕಾರಿನಲ್ಲಿ ತಂದು, ಅದರ ಡಿಕ್ಕಿಯಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಕುರಿತು ರಿಪ್ಪನಪೇಟೆಯ ದೇವರಾಜ್ ಅಲಿಯಾಸ್ ಕುಶನ್ ದೇವರಾಜ್ ಜುಲೈ 4ರಂದು ಠಾಣೆಗೆ ದೂರು ನೀಡಿದ್ದರು.
ಹೊಸನಗರ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ರಿಪ್ಪನಪೇಟೆ ಪಿಎಸ್‌ಐ ರಾಜು ರೆಡ್ಡಿ ಬಿ. ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ವಶಕ್ಕೆ ಪಡೆಯಲಾದ ಜಾನುವಾರನ್ನು ಗೋಶಾಲೆಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಮಚಂದ್ರ, ಅಶೋಕ್, ವಿಶ್ವನಾಥ್ ಮತ್ತು ನವೀನ್ ಕುಮಾರ್ ಪಾಲ್ಗೊಂಡಿದ್ದರು.