ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | RIPPONPETE NEWS | 22 ಡಿಸೆಂಬರ್ 2021
ಉಪಾಧ್ಯಕ್ಷೆಯ ರಾಜೀನಾಮೆಗೆ ಆಗ್ರಹಿಸಿ ಗ್ರಾಮ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ಸಂಭವಿಸಿದೆ.
ಇವತ್ತು ನಿಗದಿಯಾಗಿದ್ದ ಗ್ರಾಮ ಸಭೆಯನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಹಿಷ್ಕಾರ ಮಾಡಿದರು. ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ರಾಜೀನಾಮೆಗೆ ಆಗ್ರಹಿಸಲು ಕಾರಣವೇನು?
ಮಹಾಲಕ್ಷ್ಮಿ ಅಣ್ಣಪ್ಪ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲ ಪಡೆದು ಉಪಾಧ್ಯಕ್ಷೆಯಾಗಿದ್ದಾರೆ. ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆ ಸಂದರ್ಭ ಮಹಾಲಕ್ಷಿ ಅಣ್ಣಪ್ಪ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಅವರಿಗೆ ತಮ್ಮ ಬೆಂಬಲವಿಲ್ಲ ಎಂದು ಸದಸ್ಯರು ತಿಳಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಆಸೀಫ್ ಭಾಷಾಸಾಬ್, ‘ಫೆಬ್ರವರಿಯಲ್ಲಿ ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ ಸಂದರ್ಭ ಕಾಂಗ್ರೆಸ್ ಬೆಂಬಲಿತ ಒಂಬತ್ತು ಸದಸ್ಯರು ಮಹಾಲಕ್ಷ್ಮಿ ಅಣ್ಣಪ್ಪ ಅವರಿಗೆ ಮತ ನೀಡಿ ಗೆಲ್ಲಿಸಿದ್ದೆವು. ಈಗ ಅವರ ಸ್ವಾರ್ಥಕ್ಕೊಸ್ಕರ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಕಿಂಚಿತ್ತೂ ನೈತಿಕತೆ ಇದ್ದರೆ ಈ ಕೂಡಲೇ ರಾಜಿನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ’ ಎಂದರು.
ಸದಸ್ಯ ಮಧುಸೂದನ್ ಮಾತನಾಡಿ, ‘ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿ ಉಪಾಧ್ಯಕ್ಷೆಯಾಗಿರುವ ಮಹಾಲಕ್ಷ್ಮಿ ಅಣ್ಣಪ್ಪ ಅವರು ರಾಜೀನಾಮೆ ನೀಡಿ ಹೊಸದಾಗಿ ಚುನಾವಣೆ ಎದುರಿಸಿ ಬರಲಿ. ಅವರ ಎದುರು ನಾವು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಸದಸ್ಯರು ಒಕ್ಕೊರಲ ನಿರ್ಧಾರವನ್ನು ಪ್ರಕಟಿಸುತ್ತಾ ಕೂಡಲೇ ರಾಜೀನಾಮೆ ಕೊಡುವಂತೆ ಒತ್ತಾಯಿಸಿ ಸಭೆಯನ್ನು ಬಹಿಷ್ಕರಿಸಿರುವುದಾಗಿ’ ಹೇಳಿದರು. ಅಭಿವೃದ್ದಿ ಹಿತದೃಷ್ಟಿಯಿಂದ ಪಕ್ಷದಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ವಿವರಿಸಿದರು.
ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್, ಗಣಪತಿ, ಧನಲಕ್ಷ್ಮಿ, ನಿರೂಪಮಾ ರಾಕೇಶ್, ಸಾರಾಭಿ, ಪ್ರಕಾಶ್ ಪಾಲೇಕರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422