ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SAGARA NEWS | 10 ಫೆಬ್ರವರಿ 2022
108 ಆಂಬುಲೆನ್ಸ್ ಇಲ್ಲದೆ ತುಮರಿ ಭಾಗದಲ್ಲಿ ಮತ್ತೊಂದು ಹಸುಗೂಸು ಸಾವನ್ನಪ್ಪಿದೆ. ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಅನ್ನದಿರುವುದಕ್ಕೆ ಜನರು ಆಕ್ರೋಶಗೊಂಡಿದ್ದಾರೆ.
ಸಾಗರ ತಾಲೂಕು ಶರಾವತಿ ಕಣಿವೆಯ ಸಸಿಗೊಳ್ಳಿ ಎಲ್ದಮಕ್ಕಿ ಗ್ರಾಮದ ಉಮೇಶ್ ಮತ್ತು ಗೀತಾ ದಂಪತಿಯ ಮಗು ಸಾವನ್ನಪ್ಪಿದೆ. 45 ದಿನದ ಶಿಶುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸಿಗದೆ ಮಗು ಮೃತಪಟ್ಟಿದೆ.
ಎರಡು ಗಂಟೆಯ ಹೋರಾಟ
ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕೂಡಲೆ ಪೋಷಕರು ಆಂಬುಲೆನ್ಸ್’ಗೆ ಕರೆ ಮಾಡಿದ್ದಾರೆ. ಸಂಜೆ 6 ಗಂಟೆಯಿಂದ ಕರೆ ಮಾಡಿದರೂ ಆಂಬುಲೆನ್ಸ್ ಬರಲಿಲ್ಲ. ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಂಡು ಹೊಸನಗರಕ್ಕೆ ಹೋಗುವುದರಲ್ಲಿ ಮಗು ಅಸುನೀಗಿತ್ತು.
‘108ಕ್ಕೆ ಕರೆ ಮಾಡಿದರೆ ತುಮರಿಯಲ್ಲಿ ಆಂಬುಲೆನ್ಸ್ ಇಲ್ಲ ಎಂದು ತಿಳಿಸಿದರು. ಇಲ್ಲಿ ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆಗೆ ಹೋಗುವಾಗ ಮಗು ಸಾವನ್ನಪ್ಪಿತ್ತು. 6 ಗಂಟೆಯಿಂದ 8 ಗಂಟೆವರೆಗೆ ಫೋನ್ ಮಾಡಿದರೂ ಆಂಬುಲೆನ್ಸ್ ಸಿಗಲಿಲ್ಲ’ ಎಂದು ಮಗುವಿನ ತಂದೆ ಉಮೇಶ್ ಬೇಸರ ವ್ಯಕ್ತಪಡಿಸುತ್ತಾರೆ.
ಎಲ್ಲಿ ಹೋಯ್ತು ಹೊಸ ಆಂಬುಲೆನ್ಸ್?
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಹೊಸ ಆಂಬುಲೆನ್ಸ್ ದಿಢೀರ್ ಕಣ್ಮರೆಯಾಗಿದೆ. ಅಧಿಕಾರಿಗಳನ್ನು ವಿಚಾರಿಸಿದಾಗ ಸರ್ವಿಸ್’ಗೆ ತೆರಳಿದೆ ಎಂದು ತಿಳಿಸುತ್ತಾರೆ. ಕಳೆದ ನಾಲ್ಕು ದಿನದಿಂದ 108 ಅಂಬುಲೆನ್ಸ್ ಇಲ್ಲವಾಗಿದೆ. ತುರ್ತು ಸಂದರ್ಭಗಳಲ್ಲೆ ಆಂಬುಲೆನ್ಸ್ ಸಿಗುವುದಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಸರ್ವಿಸ್’ಗೆ ನಾಲ್ಕು ದಿನ ಬೇಕಾ?
ಸರ್ವಿಸ್’ಗೆ ಎಂದು ತುಮರಿಯಿಂದ ಹೊರಟಿರುವ ಆಂಬುಲೆನ್ಸ್ ನಾಲ್ಕು ದಿನ ಕಳೆದರೂ ಮರಳಿಲ್ಲ. ಆಂಬುಲೆನ್ಸ್ ಸರ್ವಿಸ್ ಮಾಡಿಸಲು ನಾಲ್ಕು ದಿನ ಬೇಕಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗ ಮಗು ಮೃತಪಡುವಂತಾಗಿದೆ. ‘ಪದೇ ಪದೆ ಆಂಬುಲೆನ್ಸ್ ಸೇವೆ ವ್ಯತ್ಯಯದಿಂದಾಗಿ ಈ ಭಾಗದ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಆಗ್ರಹಿಸಿದ್ದಾರೆ.
ಸಾವು ಇದೆ ಮೊದಲಲ್ಲ
ಆಂಬುಲೆನ್ಸ್ ಸೇವೆ ಇಲ್ಲದೆ ಸಾವು, ನೋವು ಸಂಭವಿಸುತ್ತಿರುವುದು ಇದೆ ಮೊದಲಲ್ಲ. ಕಳೆದ ವರ್ಷದ ಡಿಸೆಂಬರ್ 15ರಂದು ಹೆರಿಗೆ ನೋವಿನಿಂದ ಚೈತ್ರಾ ಎಂಬುವವರು ಒದ್ದಾಡುತ್ತಿದ್ದರು. ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಜನನವಾಯಿತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೆ ನವಜಾತ ಶಿಶು ಮೃತಪಟ್ಟಿತ್ತು.
ಅದೇ ದಿನ ತುಮರಿಯಲ್ಲಿ ಅಪಘಾತ ಸಂಭವಿಸಿತ್ತು. ಗಾಯಗೊಂಡಿದ್ದ ನಾರಾಯಣ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು. ಆದರೆ ಸಾಗರದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಸಿಗದೆ ಮರುದಿನ ನಾರಾಯಣ ಅವರು ಮೃತರಾದರು.
ಇದನ್ನೂ ಓದಿ | ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ
ಹೊಸ ಅಂಬುಲೆನ್ಸ್ ಬಂತು
ಆಂಬುಲೆನ್ಸ್ ಸಿಗದೆ 24 ಗಂಟೆ ಅವಧಿಯಲ್ಲಿ ಎರಡು ಸಾವು ಸಂಭವಿಸಿದ್ದರಿಂದ ತುಮರಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆ ನಡೆಸಿದರು. ಇದರ ಫಲ ಎಂಬಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಹೊಸ ಆಂಬುಲೆನ್ಸ್’ಗೆ ಸಾಗರದಲ್ಲಿ ಚಾಲನೆ ನೀಡಿದ್ದರು. ಆದರೆ ಈ ಆಂಬುಲೆನ್ಸ್ ತುಮರಿಗೆ ಬಂದ ಕೆಲವೆ ದಿನದಲ್ಲಿ ಮತ್ತೆ ನಾಪತ್ತೆಯಾಗಿದೆ. ಸರ್ವಿಸ್ ನೆಪದಲ್ಲಿ ತುಮರಿಯಿಂದ ಹೊರಗೆ ಹೋಗಿದ್ದು ಕಾಣೆಯಾಗಿದೆ.
ಇದನ್ನೂ ಓದಿ | ‘ಸಿಗಂದೂರು 108 ಆಂಬುಲೆನ್ಸ್’ ಕಣ್ಮರೆ, ಹೊರಜಗತ್ತಿಗೆ ಗೊತ್ತಾಗಬೇಕಿರುವ ಐದು ಸಂಗತಿ ಇಲ್ಲಿದೆ
‘ಸಿಗಂದೂರು 108’ ಎಂದೇ ಹೆಸರುವಾಸಿ
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಆಂಬುಲೆನ್ಸನ್ನು ‘ಸಿಗಂದೂರು 108’ ಎಂದು ಕರೆಯಲಾಗುತ್ತದೆ. ತುಮರಿ ಭಾಗದಲ್ಲಿ ಸುಮಾರು 20 ಸಾವಿರ ಜನರು ಇದ್ದಾರೆ. ಶರಾವತಿ ಹಿನ್ನೀರು ಭಾಗದ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಾವಿರಾರ ಜನರು ಬಂದು ಹೋಗುತ್ತಾರೆ. ತುರ್ತು ಸಂದರ್ಭ ಎಲ್ಲರಿಗೂ ‘ಸಿಗಂದೂರು 108’ ಅವಶ್ಯತೆ ಇರಲಿದೆ. ಆದರೆ ತುರ್ತು ಸಂದರ್ಭ ಆಂಬುಲೆನ್ಸ್ ನಾಪತ್ತೆಯಾದರೂ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡದೆ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422