ಸಾಗರ: ತಾಲ್ಲೂಕಿನ ತುಮರಿ ಸಮೀಪದ ಕರೂರು ಹೋಬಳಿಯ ಕೆರೆಕೈ ಸರ್ಕಾರಿ ಶಾಲೆಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಪೊಲೀಸರಿಗೆ ಸೂಚಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 47 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಘಟನಾ ಸ್ಥಳಕ್ಕೆ ಕಳೆದ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ ಅವರು, ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.

ಕರೂರು ಹೋಬಳಿ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಶಾಲೆಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆಯನ್ನು ನಿರ್ಲಕ್ಷಿಸದೆ, ಎರಡ್ಮೂರು ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆರೋಪಿಗಳ ಕುರಿತು ಖಚಿತ ಮಾಹಿತಿ ನೀಡುವವರಿಗೆ ವೈಯಕ್ತಿಕವಾಗಿ ₹50 ಸಾವಿರ ಬಹುಮಾನ ನೀಡುವುದಾಗಿ ಶಾಸಕರು ಘೋಷಿಸಿದರು. ಈ ಕುರಿತು ಕರಪತ್ರ ಸಿದ್ಧಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವಂತೆ ಸೂಚಿಸಿದರು. ಅಲ್ಲದೆ ಶಾಲೆಗಳ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಅಗತ್ಯವಾಗಿದೆ. ಕೆರೆಕೈ ಶಾಲೆಗೆ ದಾನಿಗಳ ಸಹಕಾರದೊಂದಿಗೆ 4 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.
ಪರಿಶೀಲನೆ ವೇಳೆ ಸಿಪಿಐ ಸಂತೋಷ ಶೆಟ್ಟಿ, ಪಿಡಿಒ ಭೋಗರಾಜ್, ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ.ಟಿ. ಹಾಗೂ ಮುಖ್ಯ ಶಿಕ್ಷಕಿ ಅಕ್ಷತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.