ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | TALAGUPPA NEWS | 11 ಜನವರಿ 2022
ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದ ಮಹಿಳೆಯೊಬ್ಬರು ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲೇ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾಳೆ ಎಂದು ತಿಳಿದು, ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿತ್ತು. ಕೊನೆಗೆ ರೈಲ್ವೆ ಪೊಲೀಸರು ನಡೆಸಿದ ವಿಚಾರಣೆ ವೇಳೆ ಅಸಲಿ ಕಥೆ ಹೊರಬಿದ್ದಿದೆ.
ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗೆ ಘಟನೆ ಸಂಭವಿಸಿದೆ. ಹೊನ್ನಾಳಿ ಮೂಲದ ನಿವೇದಿತಾ ಬೆಂಗಳೂರಿನಿಂದ ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ ಆಗಮಿಸಿದ್ದರು.
ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿಯನ್ನು ನಿವೇದಿತಾ ಬಂದ್ ಮಾಡಿಕೊಂಡಿದ್ದಾರೆ. ಬೋಗಿಯಲ್ಲಿದ್ದ ಫ್ಯಾನ್’ಗೆ ತನ್ನದೆ ವೇಲ್ ಕಟ್ಟಿದ್ದಾರೆ. ಇದನ್ನು ಗಮನಿಸಿದ ಸ್ವಚ್ಛತಾ ಸಿಬ್ಬಂದಿ ಈಕೆ ರೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆ ಎಂದು ಭಾವಿಸಿ, ಬಾಗಿಲು ತೆಗೆಯುವಂತೆ ಮನವೊಲಿಸಿದ್ದಾರೆ. ನಿವೇದಿತಾ ಮತ್ತು ಆಕೆಯ ಮಕ್ಕಳನ್ನು ರಕ್ಷಣೆ ಮಾಡಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಮೊಬೈಲ್’ನಲ್ಲಿ ರೆಕಾರ್ಡ್ ಆದ ವಿಡಿಯೋ ವೈರಲ್ ಆಗಿದೆ.
ವಿಚಾರಣೆ ವೇಳೆ ಹೊರಬಿತ್ತು ಸತ್ಯ ಸಂಗತಿ
ಮಹಿಳೆ ಮತ್ತು ಮಕ್ಕಳನ್ನು ಸಾಗರಕ್ಕೆ ಕರೆತಂದ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ನಿವೇದಿತಾ ತಾನು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಅಲ್ಲದೆ ತನ್ನ ಚಿಕ್ಕ ಮಗು ಆಟವಾಡುವಾಗ ಬಿದ್ದು ಮೂಳೆ ಮುರಿದುಕೊಂಡಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ. ತನ್ನದು ಹೊನ್ನಾಳಿ ತಾಲೂಕು. ಸಂಬಂದಿಯೊಬ್ಬರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಕ್ಕಿತ್ತು. ಹಾಗಾಗಿ ತನ್ನ ಮಗುವಿನ ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ ಎಂದು ಹೇಳಿದ್ದಾಳೆ.
ಗಾಢ ನಿದ್ರೆಗೆ ಜಾರಿದ ನಿವೇದಿತಾ
ನಿವೇದಿತಾ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತೆರಳಬೇಕಿತ್ತು. ಹಾಗಾಗಿ ಬೆಂಗಳೂರಿನಿಂದ ರೈಲಿನಲ್ಲಿ ಆಗಮಿಸಿದ್ದರು. ರೈಲು ಶಿವಮೊಗ್ಗ ತಲುಪುವ ಹೊತ್ತಿಗೆ ನಿವೇದಿತಾ ಗಾಢ ನಿದ್ರೆಗೆ ಜಾರಿದ್ದರು. ಬೆಳಗ್ಗೆ 7.30ರ ಹೊತ್ತಿಗೆ ತಾಳಗುಪ್ಪ ತಲುಪಿದಾಗ ಎಚ್ಚರವಾಗಿದೆ.
ರೈಲು ಬೋಗಿ ಲಾಕ್ ಮಾಡಿದಳು
ಶಿವಮೊಗ್ಗದಲ್ಲಿ ಇಳಿಯುವ ಬದಲು ತಾಳಗುಪ್ಪ ತಲುಪಿರುವ ವಿಚಾರ ತಿಳಿದು ನಿವೇದಿತಾ ಗಲಿಬಿಲಿಗೊಂಡರು. ಪ್ರಯಾಣಿಕರೆಲ್ಲ ರೈಲು ಇಳಿದ ಮೇಲೆ ಬೋಗಿಯನ್ನು ಬಂದ್ ಮಾಡಿದರು. ಶೌಚಾಲಯಕ್ಕೆ ಹೋಗಿದ್ದಾರೆ. ಇದನ್ನು ಗಮನಿಸಿದ ಕೆಲವರು ಬೋಗಿಯಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆ ಅಂದುಕೊಂಡರು. ಮಗುವನ್ನು ಮಲಗಿಸಲು ತನ್ನದೇ ವೇಲ್’ನಿಂದ ಕಟ್ಟಿದ್ದ ಜೋಲಿಯನ್ನು ಕಂಡು ನೇಣು ಕುಣಿಕೆ ಎಂದು ಭಾವಿಸಿಕೊಂಡಿದ್ದಾರೆ.
ನಿಲ್ದಾಣದಲ್ಲಿ ಕೆಲ ಹೊತ್ತು ಗೊಂದಲ, ಆತಂಕ
ನಿವೇದಿತಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಭಾವಿಸಿದ ರೈಲ್ವೆ ಇಲಾಖೆ ಸ್ವಚ್ಛತಾ ಸಿಬ್ಬಂದಿ, ಬೋಗಿಯ ಕಿಟಕಿ ಬಳಿ ನಿಂತು ಬೋಗಿಯ ಬಾಗಿಲು ತೆಗೆಯುವಂತೆ ಒತ್ತಾಯಿಸಿದರು. ‘ಇಬ್ಬರು ಮಕ್ಕಳನ್ನು ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು’ ಎಂದು ಮನವೊಲಿಸಿದರು. ಹರಸಾಹಸ ಮಾಡಿ ಬಾಗಿಲು ತೆಗೆಯುವಂತೆ ನೋಡಿಕೊಂಡರು. ಅಲ್ಲದೆ ಮಹಿಳೆ ಮತ್ತು ಮಕ್ಕಳನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಸಲಿ ವಿಚಾರ ತಿಳಿದು ಸಾಗರ ರೈಲ್ವೆ ಪೊಲೀಸರು, ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ ರೈಲ್ವೆ ಬೋಗಿಯಲ್ಲಿ ಮಹಿಳೆಯ ರಕ್ಷಣೆ ಮಾಡುವ ಸಂದರ್ಭ ಚಿತ್ರೀಕರಣ ಮಾಡಿದ ವಿಡಿಯೋ ವೈರಲ್ ಆಗಿದ್ದು, ಜನ ಆತಂಕ ವ್ಯಕ್ತಪಡಿಸಿದ್ದಾರೆ.
shimoga,
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422