ಸಾಗರ: ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರ ಪ್ರದರ್ಶಿಸಿ ಕೊಟ್ಟಿಗೆಯಲ್ಲಿದ್ದ ಮಲೆನಾಡು ಗಿಡ್ಡ ತಳಿಯ ಹಸು ಕದ್ದೊಯ್ದಿದ್ದಾರೆ.
ಸಾಗರ ತಾಲ್ಲೂಕಿನ ಹೊಸೂರು ಗ್ರಾಮದ ವನಜಾಕ್ಷಿ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕೃತ್ಯ ನಡೆದಿದೆ. ವನಜಾಕ್ಷಿ ಅವರು ಮಲೆನಾಡು ಗಿಡ್ಡ ತಳಿಯ ಹಸು ಸಾಕಿದ್ದರು. ಸೆಪ್ಟೆಂಬರ್ 25ರ ರಾತ್ರಿ 2:45ರ ಹೊತ್ತಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಕಳ್ಳರು ಮನೆಯ ಮುಂಭಾಗ ವಾಹನ ನಿಲ್ಲಿಸಿದ್ದರು. ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದಾಗ ಮನೆಯವರು ಹೊರಬಂದು ನೋಡಿದ್ದಾರೆ. ಈ ವೇಳೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದರು.

ಉಳಿದಿಬ್ಬರು ಕೊಟ್ಟಿಗೆಯಲ್ಲಿದ್ದ ಹಸುವನ್ನು ಬಿಚ್ಚಿ ಕಾರಿನ ಡಿಕ್ಕಿಗೆ ತುಂಬಿಕೊಂಡು ಆವಿನಹಳ್ಳಿ ಕಡೆಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ಮಲೆನಾಡು ಗಿಡ್ಡ ತಳಿಯ ಸುಮಾರು ₹45,000 ಮೌಲ್ಯದ ಹಸುವನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.