ಹೆಗ್ಗೋಡು ಬಳಿ ಕಾರು ತಡೆದ ಪೊಲೀಸ್‌, ಕಾರಿನಿಂದ ಇಳಿದು ಓಡಿದ ಡ್ರೈವರ್‌, ಆಗಿದ್ದೇನು?

ಸಾಗರ: ಹುಲಿದೇವರಬನದಿಂದ ಆನಂದಪುರದ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 7.50 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ ಕಾರನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 43 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹುಲಿದೇವರಬನದಿಂದ ಆನಂದಪುರದ ಕಡೆಗೆ ಸಿಲ್ವರ್ ಬಣ್ಣದ ಹುಂಡೈ ಅಸೆಂಟ್ ಕಾರಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆ ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ನಾಲ್ಕು ರಸ್ತೆ ಕ್ರಾಸ್ ಬಳಿ ಪೊಲೀಸರು ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆಗ ಚಾಲಕ ಕಾರನ್ನು ರಸ್ತೆ ಬದಿ ನಿಲ್ಲಸಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Police-Jeep-With-Light-New.

ಪರಿಶೀಲಿಸಿದಾಗ ಕಾರಿನಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮುದ್ರೆಯಿದ್ದ 15 ಗೋಣಿ ಚೀಲಗಳಲ್ಲಿ ಅಕ್ಕಿ ಪತ್ತೆಯಾಗಿದೆ. ಪ್ರತಿ ಮೂಟೆಯಲ್ಲಿ 50 ಕೆ.ಜಿ ಅಕ್ಕಿ ಇತ್ತು ಎಂದು ತಿಳಿಸಲಾಗಿದೆ. ಅಕ್ಕಿಯ ಮೌಲ್ಯ ₹17,400 ಎಂದು ಅಂದಾಜಿಸಲಾಗಿದೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಾರಿನ ಚಾಲಕ ಹಾಗೂ ಕಾರಿನ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಅಡಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.