ಸಾಗರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರ ಸೂಚನೆ ಬೆನ್ನಲ್ಲೆ ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೆಸರ ಗ್ರಾಮದಲ್ಲಿ ಒತ್ತುವರಿಯಾಗಿದ್ದ 16 ಗುಂಟೆ ಕೆರೆ ಜಾಗವನ್ನು ಪಂಚಾಯತಿ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಅಕ್ಟೋಬರ್ 25 ರಂದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರು, ಗ್ರಾಮೀಣ ಭಾಗದ ಕೆರೆಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದರು. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಹೆದರದೆ ಕ್ರಮ ಕೈಗೊಂಡು ಕೆರೆಗಳನ್ನು ಸಂರಕ್ಷಿಸಬೇಕು ಎಂದು ಎಚ್ಚರಿಸಿದ್ದರು.

ಸತತ ಹೋರಾಟಕ್ಕೆ ಸಿಕ್ಕ ಜಯ
ಹೊನ್ನೆಸರ ಗ್ರಾಮದ ಸರ್ವೆ ಸಂಖ್ಯೆ 53 ರಲ್ಲಿದ್ದ 2 ಎಕರೆ 11 ಗುಂಟೆ ವಿಸ್ತೀರ್ಣದ ವಿರೂಪಾಕ್ಷನ ಕೆರೆಯ ತೂಬು ಒಡೆದು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಕುರಿತು 2022 ರಿಂದ ಸತತ ಹೋರಾಟ ನಡೆಸಿದ್ದ ಗ್ರಾಮಸ್ಥರು, ಫಲ ಸಿಗದಿದ್ದಾಗ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ನೀಡಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದ ಸಚಿವರು, ಸೆಪ್ಟೆಂಬರ್ 29 ರಂದೇ ಇಲಾಖೆಯ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿ.ಪಂ. ಸಿಇಒ ಅವರಿಗೆ ಸ್ಥಳ ಪರಿಶೀಲಿಸಿ ಕೆರೆ ಒತ್ತುವರಿ ತೆರವುಗೊಳಿಸಲು ಸೂಚಿಸಿದ್ದರು. ಬಳಿಕ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಕುರಿತು ನಿರ್ದೇಶನ ನೀಡಿದ್ದರು.
ಸಚಿವರ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಹೆಗ್ಗೋಡು ಗ್ರಾಮ ಪಂಚಾಯತಿ ಅಧಿಕಾರಿಗಳು, ಕೆರೆ ಪ್ರದೇಶದ ಸರ್ವೆ ಮಾಡಿಸಿ 2 ಎಕರೆ 11 ಗುಂಟೆ ಕೆರೆಯಲ್ಲಿ ಒತ್ತುವರಿಯಾಗಿದ್ದ 16 ಗುಂಟೆ ಜಾಗವನ್ನು ಜೆಸಿಬಿ ಯಂತ್ರದೊಂದಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.