ಹೊನ್ನೆಸರದಲ್ಲಿ ಗಾಂಧಿ ಸಂತೆ, ಏನೆಲ್ಲ ಸಿಗುತ್ತೆ? ಎರಡು ದಿನ ಏನೇನೆಲ್ಲ ಕಾರ್ಯಕ್ರಮ ಇರುತ್ತೆ? ಇಲ್ಲಿದೆ ಡಿಟೇಲ್ಸ್

ಸಾಗರ: ತಾಲ್ಲೂಕಿನ ಹೊನ್ನೆಸರ ಶ್ರಮಜೀವಿ ಆಶ್ರಮದಲ್ಲಿ ಸೆ.26 ಮತ್ತು 27ರಂದು ಗಾಂಧಿ ಸಂತೆ ಆಯೋಜಿಸಲಾಗಿದೆ. ಕರ್ನಾಟಕದ ಎಲ್ಲ ಗ್ರಾಮೀಣ ಉತ್ಪಾದಕರು ಪಾಲ್ಗೊಳ್ಳಲಿದ್ದಾರೆ ಎಂದು ಚರಕ ಸಂಸ್ಥೆ ಸ್ಥಾಪಕ ಪ್ರಸನ್ನ ಹೆಗ್ಗೋಡು ತಿಳಿಸಿದರು.

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ಕವಿ-ಕಾವ್ಯ ಟ್ರಸ್ಟ್, ದೇಸಿ ಟ್ರಸ್ಟ್, ಜೀವನ್ಮುಖಿ ಸಾಗರ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಕೇವಲ ಚರಕದ ವಸ್ತುಗಳಲ್ಲದೆ ಶುದ್ಧ ಕಂಬಳಿ ವಸ್ತುಗಳು, ರೇಷ್ಮೆ, ಖಾದಿ, ಶುದ್ಧ ಆಹಾರ, ಸಾವಯವ ಗೊಬ್ಬರ ಎಲ್ಲವೂ ಲಭ್ಯವಾಗುವಂತೆ ಮಾಡಿದ್ದೇವೆ. ಸುಂದರ ಪ್ರಕೃತಿ ನಡುವೆ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ತಜ್ಞರೊಡನೆ ಸಂವಾದ ಇರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

SAGARA-NEWS-GRAPHICS-BY-SHIVAMOGGA-LIVE

ಸೆ.26ರಂದು ಸಂಜೆ 4.30ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಗಾಂಧಿ ಸಂತೆಯನ್ನು ಉದ್ಘಾಟಿಸುವರು. ಮಾಜಿ ಸಚಿವ ಹೆಚ್.ಕೆ.ಪಾಟೀಲ್ ವಸ್ತುಸಂಗ್ರಹಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ವಿರೂಪಾಕ್ಷನ ಜಡ್ಡು ಕೆರೆ ಅಂಗಳದಲ್ಲಿ ನಿರ್ಮಿಸಲಿರುವ ಗಂಗಾತಟ ಉದ್ಘಾಟಿಸುವರು. ಶಾಸಕ ಗೋಪಾಲಕೃಷ್ಣ ಬೇಳೂರು ಕೊಡು-ಕೊಳ್ಳುವವರ ಸಮಾವೇಶ ಉದ್ಘಾಟಿಸುವರು. ತಹಸೀಲ್ದಾರ್ ಡಾ. ಆರ್.ಪ್ರತಿಭಾ, ಚರಕ ಅಧ್ಯಕ್ಷೆ ಮಹಾಲಕ್ಷ್ಮೀ ಭಾಗವಹಿಸುವರು. ಸಂಜೆ 6.30ಕ್ಕೆ ವಿದುಷಿ ವಸುಧಾ ಶರ್ಮಾ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಚರಕ ಶ್ರಮಜೀವಿಗಳಿಂದ ಫ್ಯಾಷನ್ ಶೋ ನಡೆಯಲಿದೆ ಎಂದರು.

ಸೆ.27ರಂದು ಬೆಳಿಗ್ಗೆ ಪ್ರಕೃತಿ ನಡಿಗೆ ಹಾಗೂ ಶ್ರಮದಾನ ನಡೆಯಲಿದೆ. ಬೆಳಿಗ್ಗೆ 10.30ರಿಂದ ರಾತ್ರಿ 8ರವರೆಗೆ ಗಾಂಧಿ ಸಂತೆ ನಡೆಯಲಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಟೈ-ಆ್ಯಂಡ್ -ಡೈ ಹಾಗೂ ಮರದ ಪಡಿಯಚ್ಚು ಮುದ್ರಣ ಕಾರ್ಯಾಗಾರ ಆಯೋಜಿಸಲಾಗಿದೆ. ಸಂಜೆ 5ರಿಂದ 6ರವರೆಗೆ ಕುಗ್ವೆಯ ಜಾನಪದ ಡೊಳ್ಳು ತಂಡದಿಂದ ಡೊಳ್ಳು ಕುಣಿತ ಹಾಗೂ ಸಂಜೆ 6ರಿಂದ 7.30ರವರೆಗೆ ತ್ರಿಷಾ ಸಾಗರ ತಂಡದಿಂದ ಲಘು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮೀ, ಪದ್ಮಶ್ರೀ, ಪೀಟ‌ರ್, ರಮೇಶ್ ಇತರರಿದ್ದರು.‌