ಸಾಗರ: ತಾಯಿ ಮನೆಗೆ ಬಂದಿದ್ದ ಮಹಿಳೆಯೊಬ್ಬರು ಲಗೇಜ್ ಬ್ಯಾಗ್‌ನಲ್ಲಿ ಇರಿಸಿದ್ದ ₹13.18 ಲಕ್ಷಕ್ಕೂ ಅಧಿಕ ಮೌಲ್ಯದ 139.76 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ. ಸಾಗರದ ಜಿ.ಪಿ.ರಸ್ತೆಯ ಮನೆಯಲ್ಲಿ ಘಟನೆ ಸಂಭವಿಸಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ವಿದ್ಯಾಶ್ರೀ ಬಿ. ಪೈ ಎಂಬುವವರಿಗೆ ಸೇರಿದ ಚಿನ್ನಾಭರಣ ಕಳೆದಿದೆ. ಆಗಸ್ಟ್ 26ರ ಬೆಳಿಗ್ಗೆ ತಮ್ಮ ಪತಿ ಮತ್ತು ತಾಯಿ ಜೊತೆಗೆ ಬೆಂಗಳೂರಿನಿಂದ ಸಾಗರ ಪಟ್ಟಣದ ಜಿ.ಪಿ. ರಸ್ತೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದರು. ಈ ವೇಳೆ ತಮ್ಮಲ್ಲಿದ್ದ ಚಿನ್ನಾಭರಣಗಳು ಹಾಗೂ ಲಗೇಜ್ ಬ್ಯಾಗ್‌ಗಳನ್ನು ತಾಯಿಯ ಮನೆಯಲ್ಲಿ ಇರಿಸಿದ್ದರು.

ಆಗಸ್ಟ್ 30 ರಂದು ಕುಮಟಾದಲ್ಲಿರುವ ಪತಿಯ ಮನೆಯಲ್ಲಿ ಶ್ರಾವಣ ಪೂಜಾ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆ ಆಗಸ್ಟ್ 29ರ ರಾತ್ರಿ ವಿದ್ಯಾಶ್ರೀ ಅವರು ಲಗೇಜ್ ಪ್ಯಾಕ್ ಮಾಡಲು ಮುಂದಾಗಿದ್ದಾರೆ. ಆಗ ತಮ್ಮ ಕಪ್ಪು ಬಣ್ಣದ ಬ್ಯಾಗ್‌ನಲ್ಲಿಟ್ಟಿದ್ದ ಹಳದಿ ಬಣ್ಣದ ಪೌಚ್ ಮಾಯವಾಗಿರುವುದು ಅರಿವಿಗೆ ಬಂದಿದೆ.
ಆ ಪೌಚ್‌ನಲ್ಲಿ ₹4,47,368 ಮೌಲ್ಯದ 31 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ₹6,12,690 ಮೌಲ್ಯದ 55.73 ಗ್ರಾಂ ತೂಕದ ಬಂಗಾರ ಹಾಗೂ ಹವಳದ ಸರ, ₹94,313 ಮೌಲ್ಯದ 13.30 ಗ್ರಾಂ ತೂಕದ ಬಂಗಾರದ ನೆಕ್ ಚೈನ್, ₹1,09,318 ಮೌಲ್ಯದ 35 ಗ್ರಾಂ ತೂಕದ ಬಂಗಾರದ ಬಳೆಗಳು ಹಾಗೂ ₹54,500 ಮೌಲ್ಯದ 5 ಗ್ರಾಂ ತೂಕದ ಬಂಗಾರದ ಉಂಗುರ ಸೇರಿದಂತೆ ಒಟ್ಟು 139.76 ಗ್ರಾಂ ತೂಕದ ₹13,18,189 ಮೌಲ್ಯದ ಆಭರಣಗಳು ಕಳವಾಗಿವೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.