ಆನಂದಪುರ ಪೊಲೀಸರ ಕಾರ್ಯಾಚರಣೆ, ಕುಖ್ಯಾತ ಕಳ್ಳ ಅರೆಸ್ಟ್‌, ಲಕ್ಷ ಲಕ್ಷದ ಅಭರಣ ವಶಕ್ಕೆ, ಏನಿದು ಕೇಸ್‌?

ಸಾಗರ: ಯಡೇಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ₹12 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳುವಾಗಿದ್ದ ಆಭರಣಗಳನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ವಡ್ಡನಾಳ್ ರಾಜಣ್ಣ ಬಡಾವಣೆಯ ಚಂದನ ಅಲಿಯಾಸ್‌ ಚಾಂದ್‌ಪೀರ್ ಅಲಿಯಾಸ್‌ ಮೊಹಮ್ಮದ್ ಯೂನಸ್ (30) ಬಂಧಿತ ಆರೋಪಿ.

281123-Anandapura-Police-Station-Board.webp

ಏನಿದು ಪ್ರಕರಣ?

ಯಡೇಹಳ್ಳಿ ರಥಬೀದಿಯ ನಿವಾಸಿ ಪ್ರದೀಪ್ ಎಂಬುವವರ ಮನೆಯಲ್ಲಿ ಸೆಪ್ಟೆಂಬರ್ 1ರ ರಾತ್ರಿ ಈ ಕಳ್ಳತನ ನಡೆದಿತ್ತು. ಕಳ್ಳರು ಬಾಗಿಲ ಪಕ್ಕದ ಕಿಟಕಿ ಮೂಲಕ ಕೈಹಾಕಿ ಒಳಗಿನ ಚಿಲಕ ತೆಗೆದು ಒಳಗೆ ನುಗ್ಗಿದ್ದರು. ಬೀರುವಿನಲ್ಲಿದ್ದ ₹12 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ ದೋಚಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

10ಕ್ಕೂ ಹೆಚ್ಚು ಕಳವು ಪ್ರಕರಣ

ತನಿಖೆ ನಡೆಸಿದ ಆನಂದಪುರ ಪೊಲೀಸರು ನವೆಂಬರ್ 18 ರಂದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಚಾಂದ್‌ಪೀರ್ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿಂದೆ ಶಿಕ್ಷೆಗೂ ಗುರಿಯಾಗಿದ್ದ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳ್ಳತನವಾಗಿದ್ದ ಆಭರಣಗಳನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: