ಕಾರ್ಗಲ್‌ ಪೊಲೀಸ್‌ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಸಾಗರ: ಕಾರ್ಗಲ್ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಈವರೆಗೆ ಜೋಗದಲ್ಲಿನ ಹಳೆಯ ಕಟ್ಟಡದಲ್ಲಿ ಠಾಣೆ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದರಿಂದ ಕಂಪ್ಯೂಟರ್ ಸೇರಿ ಹಲವು ಉಪಕರಣ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಿಬ್ಬಂದಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಕಾರ್ಗಲ್‌ನಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನೂತನ ಠಾಣೆ ನಿರ್ಮಿಸಲಾಗಿದೆ ಎಂದರು.

Kargal-Police-Station-Inaugurated-by-MLA-Beluru-Gopalakrishna

ಕರೂರು ಹೋಬಳಿಯ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳನ್ನು ಜನರು ಅಪೇಕ್ಷಿಸಿದರೆ ಸಾಗರ ಗ್ರಾಮಾಂತರ ಉಪ ಠಾಣೆ ವ್ಯಾಪ್ತಿಗೆ ಸೇರಿಸುವ ಕುರಿತು ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು. ಸಿಗಂದೂರು ಸೇತುವೆ ನಿರ್ಮಾಣದಿಂದ ಸಾಗರ ಸಂಪರ್ಕ ಸುಲಭವಾಗಿದ್ದು ಈ ಭಾಗದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ ಎಂದರು.

ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿಗೆ ಮುಖ್ಯಮಂತ್ರಿ ಗಳು ಸುಮಾರು 20 ಕೋಟಿ ರೂ. ಅನುದಾನ ಘೋಷಿಸಿದ್ದು, ರಸ್ತೆ, ಚರಂಡಿ, ವಿದ್ಯುತ್ ಹಾಗೂ ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಜೋಗದಲ್ಲಿ ಶೀಘ್ರದಲ್ಲೇ ಶ್ರೀಸ್ಟಾರ್ ಹೋಟೆಲ್, ಕೇಬಲ್ ಕಾರ್ ಹಾಗೂ ಸಿಂಗಾಪುರ ಮಾದರಿಯ ಕಾರಂಜಿ ನಿರ್ಮಾಣವಾಗಲಿದೆ.

– ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕ

ಶಾಸಕರ ಸಹಕಾರದಿಂದ ಪೊಲೀಸ್ ಠಾಣೆ ಲೋಕಾರ್ಪಣೆಯಾಗಿದೆ. ₹2.5 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಇಲ್ಲಿನ ಪೊಲೀಸ್ ಸಿಬ್ಬಂದಿಗೆ ಮನೆ ನಿರ್ಮಿಸಿಕೊಡಲಾಗಿದೆ. ಶಾಸಕರ ನಿಧಿಯಿಂದ ಎರಡು ಪೊಲೀಸ್ ವಾಹನಗಳನ್ನು ಇಲಾಖೆಗೆ ನೀಡಿದ್ದಾರೆ.

– ಬಿ.ನಿಖಿಲ್‌, ಜಿಲ್ಲಾ ರಕ್ಷಣಾಧಿಕಾರಿ

ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಸಿಗಂದೂರು ದೇವಸ್ಥಾನದ ಪ್ರಧಾನ ಆರ್ಚಕ ಶೇಷಗಿರಿ ಭಟ್, ಸಾಗರ ಡಿವೈಎಸ್‌ಪಿ ಡಾ.ಬೆನಕ ಪ್ರಸಾದ್, ಚಂದ್ರಕಾಂತ್ ಮತ್ತಿತರರು ಹಾಜರಿದ್ದರು. ಇನ್ಸ್‌ಪೆಕ್ಟರ್‌ಗಳಾದ ಸಂತೋಷ ಶೆಟ್ಟಿ ಸ್ವಾಗತಿಸಿ, ಪುಲ್ಲಯ್ಯ ರಾಥೋಡ್ ವಂದಿಸಿದರು. ಗೀತಾ ನಿರೂಪಿಸಿದರು.