ಆನಂದಪುರ ಬಳಿ ನೇಣು ಬಿಗಿದುಕೊಂಡಿದ್ದ KSRTC ಚಾಲಕ ಶಿವಮೊಗ್ಗದಲ್ಲಿ ಸಾವು, ಕಾರಣವೇನು?

 ಶಿವಮೊಗ್ಗ  LIVE 

ಸಾಗರ: ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ KSRTC ಚಾಲಕ (KSRTC driver) ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಕೆಲಸದ ಸ್ಥಳದಲ್ಲಿನ ಕಿರುಕುಳವೆ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ.

ಸಾಗರ ತಾಲೂಕು ತ್ಯಾಗರ್ತಿಯ ನೀಚಡಿ ಬಳಿಯ ಮಳ್ಳ ಗ್ರಾಮದ ನಾಗಪ್ಪ (58) ಮೃತರು. ಕಳೆದ ಸೋಮವಾರ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ ನಾಗಪ್ಪ, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಕಳೆದ ಒಂದೂವರೆ ತಿಂಗಳಿನಿಂದ ತಮಗೆ ಡ್ಯೂಟಿ ನೀಡದೆ ಕಿರುಕುಳ ನೀಡಲಾಗುತ್ತಿತ್ತು ಎಂದು ನಾಗಪ್ಪ ಮನನೊಂದಿದ್ದರು ಎನ್ನಲಾಗಿದೆ. ಮೂರ್ನಾಲ್ಕು ಬಾರಿ ಕೆಲಸಕ್ಕಾಗಿ ಡಿಪೋಗೆ ಹೋದರೂ ಡ್ಯೂಟಿ ಸಿಗದೆ ವಾಪಸ್ ಬಂದಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ನಾಗಪ್ಪ ಅವರ ಪುತ್ರ ರಾಕೇಶ್‌, ‘ಒಂದೂವರೆ ತಿಂಗಳಿಂದ ಡ್ಯೂಟಿ ಕೊಡದ ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಸಂಬಳವು ಆಗಿರಲಿಲ್ಲ. ನನ್ನ ತಂಗಿ ವಿಶೇಷಚೇತರಾಗಿದ್ದಾರೆ. ಅವರನ್ನು ನೋಡಿಕೊಳ್ಳುವ ಸಲುವಾಗಿ ನನ್ನ ತಾಯಿ ಕೂಡ ಟೈಲರಿಂಗ್‌ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಡ್ಯೂಟಿ ಕೊಡದೆ ಇದ್ದಿದ್ದರಿಂದ ತೀವ್ರ ಮನನೊಂದಿದ್ದರು. ನಮ್ಮ ಮನೆಯ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸರ್ಕಾರ ನೆರವು ಕೊಟ್ಟರೆ ಅನುಕೂಲʼ ಎಂದು ತಿಳಿಸಿದರು.  

080126 KSRTC Driver Nagappa breathed last in Shimoga

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಾಗಪ್ಪ ಅವರ ಸಂಬಂಧಿ ನಾರಾಯಣ, ‘ಬಹು ವರ್ಷದಿಂದ KSRTCಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಮತ್ತು ಪುತ್ರ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ನಾಗಪ್ಪ ಅವರು ನೇಣು ಬಿಗಿದುಕೊಂಡಿದ್ದರು. ಅಕ್ಕಪಕ್ಕದವರ ಸಹಾಯದಿಂದ ಸಾಗರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್‌ ಆಸ್ಪತ್ರೆಗೆ ಕರೆ ತರಲಾಗಿತ್ತು. ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪುನಃ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತುʼ ಎಂದರು.

ಇದನ್ನೂ ಓದಿ » ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ

ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಾಗಪ್ಪ ಅವರ ಮರಣೋತ್ತರ ಪರೀಕ್ಷೆ ನಡೆಯಿತು. KSRTC ನೌಕರರು ಅಂತಿಮ ದರ್ಶನ ಪಡೆದರು. ಬಳಿಕ ನಾಗಪ್ಪ ಅವರ ಮೃತದೇಹವನ್ನು ಅವರ ಸ್ನೇಹಿತರು ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಕೊಂಡೊಯ್ದರು.

ಘಟನೆ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment